ಎಸ್ ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಹುಟ್ಟುರಾದ ಸೋಮನಹಳ್ಳಿಯಲ್ಲಿ ಬುಧವಾರ ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ, ತಮ್ಮ ಅಜ್ಜ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ರಾಜಕೀಯ ಮುತ್ಸದಿ ಎಸ್ಎಂಕೆ ಪಂಚಭೂತಗಳಲ್ಲಿ ಲೀನರಾದರು.
ಅಗ್ನಿ ಸ್ಪರ್ಶಕ್ಕೂ ಮುನ್ನ ಎಸ್ ಎಂ ಕೃಷ್ಣ ಅವರ ಚಿತೆಗೆ ಪತ್ನಿ ಪ್ರೇಮಾ, ಪುತ್ರಿಯರು, ಸಂಬಂಧಿಕರು ಗಂಧದ ಕಟ್ಟಿಗೆ ಇಟ್ಟು ವಿದಾಯ ಹೇಳಿದರು. ಬಳಿಕ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು.
ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯ್ತು. ನಂತರ ಅಂತಿಮವಾಗಿ ಮೊಮ್ಮಗ ಅಮರ್ತ್ಯ ಹೆಗ್ಡೆ ಎಸ್.ಎಂ.ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಚಿತೆಗೆ 1 ಟನ್ ಶ್ರೀಗಂಧದ ಕಟ್ಟಿಗೆ ಜತೆ ಇತರೆ ಕಟ್ಟಿಗೆ ಹಾಗೂ 50 ಕೆಜಿ ತುಪ್ಪದಿಂದ ಅಭಿಷೇಕ ಕ್ರಿಯೆ ಕಾರ್ಯ ಮಾಡಲಾಯಿತು. ಇದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ ಖಾದರ್, ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್ಡಿ ಕುಮಾರಸ್ವಾಮಿ, ಶಾಸಕರು, ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು, ಮಠಾಧೀಶರು, ಸ್ವಾಮೀಜಿಗಳು ಸರ್ಕಾರಿ ಉನ್ನತ ಅಧಿಕಾರಿಗಳು ಎಸ್ಎಂ ಕೃಷ್ಣ ಅವರಿಗೆ ಪುಷ್ಪ ನಮನ ಸಲ್ಲಿಸಿ ಅಗಲಿದ ನಾಯಕನಿಗೆ ವಿದಾಯ ಹೇಳಿದರು.