2ಎ ಮೀಸಲಾತಿಗಾಗಿ ಆಗ್ರಹಿಸಿ ಸುವರ್ಣಸೌಧ ಮುಂದೆ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುವರ್ಣಸೌಧ ಆವರಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆದರೂ ಸಹ ಪ್ರತಿಭಟನೆಕಾರರು ಬ್ಯಾರಿಕೇಡ್ಗಳನ್ನು ತಳ್ಳಿ ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ್ದಾರೆ. ಇದರಿಂದ ಸುವರ್ಣಸೌಧ ಮುಂಭಾಗ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ.
ಪೊಲೀಸರು ಮತ್ತು ಪಂಚಮಸಾಲಿ ಸಮಾಜದ ಜನರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಹೋರಾಟಗಾರರು ಸಹ ಪೊಲೀಸರ ಜತೆ ವಾಗ್ದಾದ ನಡೆಸಿದ್ದಾರೆ. ಪೊಲೀಸರಿಗೆ ಹಾಗೂ ಪ್ರತಿಭಟನೆಕಾರರಿಗೆ ಗಾಯಗಳಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಕಲ್ಲು ತೂರಾಟದಲ್ಲಿ ಇಪ್ಪತ್ತಕ್ಕೂ ಅಧಿಕ ಪೊಲೀಸರಿಗೆ ಗಾಯಗಳಾಗಿದ್ದರೆ, ಐವತ್ತಕ್ಕೂ ಅಧಿಕ ಹೋರಾಟಗಾರರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತೆಸೆದು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದವರ ಮೇಲೂ ಸಹ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಲಾಠಿಚಾರ್ಜ್ ಮಾಡಿದ್ದಾರೆ.
ಪೊಲೀಸರ ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆಕಾರರ ಆಕ್ರೋಶಗೊಂಡಿದ್ದು, ಪೊಲೀಸರ ವಾಹನ ಹಾಗೂ ರಾಜಕಾರಣಿಗಳ ಕಾರುಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಲ್ಲದ್ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೆರಳಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಚಪ್ಪಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಎಡಿಜಿಪಿ ಹಿತೇಂದ್ರ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು ಅವರನ್ನು ಮಾತನಾಡಲಿಕ್ಕೆ ಕರೆದಿದ್ದೆ. ಆದರೆ ಅವರು ಬರಲಿಲ್ಲ. ಅಧಿವೇಶನ ಮುಗಿತು ನಾನು ಹೊರಟೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅವರ ಹಕ್ಕು. ನಾವು ಅದನ್ನು ವಿರೋಧಿಸುವುದಿಲ್ಲ” ಎಂದು ಹೇಳಿದ್ದಾರೆ.