Homeಕರ್ನಾಟಕಒಕ್ಕಲಿಗ ಸ್ವಾಮೀಜಿ ವಿರುದ್ಧ ಕ್ರಮ, ಮುಸ್ಲಿಂ ಮುಖಂಡನ ವಿರುದ್ಧ ಕ್ರಮ ಏಕಿಲ್ಲ: ಆರ್‌. ಅಶೋಕ್ ಪ್ರಶ್ನೆ

ಒಕ್ಕಲಿಗ ಸ್ವಾಮೀಜಿ ವಿರುದ್ಧ ಕ್ರಮ, ಮುಸ್ಲಿಂ ಮುಖಂಡನ ವಿರುದ್ಧ ಕ್ರಮ ಏಕಿಲ್ಲ: ಆರ್‌. ಅಶೋಕ್ ಪ್ರಶ್ನೆ

ಒಕ್ಕಲಿಗ ಸ್ವಾಮೀಜಿ ವಿರುದ್ಧ ಪಟಾಪಟ್‌ ಎಂದು ಕ್ರಮ ಕೈಗೊಳ್ಳುವ ಕಾಂಗ್ರೆಸ್‌ ಸರ್ಕಾರ, ನ್ಯಾಯಾಲಯಕ್ಕೆ ಬೆಲೆ ಕೊಡಲ್ಲ ಎಂಬ ಮುಸ್ಲಿಂ ಮುಖಂಡನ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ವಕ್ಫ್‌ ಭೂ ಕಬಳಿಕೆ ವಿರುದ್ಧ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೋವಿನಿಂದ ಮಾತಾಡಿರುವುದಕ್ಕೆ ಕಾಂಗ್ರೆಸ್‌ ಸರ್ಕಾರ ಪಟಾಪಟ್‌ ಎಂದು ತಕ್ಷಣದ ಕ್ರಮ ಕೈಗೊಂಡಿದೆ. ಮುಸ್ಲಿಂ ಲೀಗ್‌ನ ಮೌಲಾನ ಅಬು ಎಂಬುವನು ಸಂಸತ್ತು, ನ್ಯಾಯಾಲಯವನ್ನು ತಿರಸ್ಕರಿಸುತ್ತೇನೆಂದು ಮಾತಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕುಕ್ಕರ್‌ ಬ್ರದರ್‌ಗಳ ಮೇಲೆ ಪ್ರೀತಿ ಇದ್ದು, ಅವರ ವಿರುದ್ಧ ಕ್ರಮ ವಹಿಸುತ್ತಿಲ್ಲ” ಎಂದರು.

“ನಾನು ಎಂದಿಗೂ ನಮ್ಮ ಸ್ವಾಮೀಜಿಗಳ ಪರವಾಗಿಯೇ ನಿಲ್ಲುತ್ತೇನೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಒಮ್ಮೆ ಮುಸ್ಲಿಮರು ಬೇಕು, ಮತ್ತೊಮ್ಮೆ ಒಕ್ಕಲಿಗರು ಬೇಕು. ಇವರು ಸಿಎಂ ಸ್ಥಾನದ ಬಗ್ಗೆ ಮಾತಾಡಿದ್ದಕ್ಕೆ ಡಾ.ಜಿ.ಪರಮೇಶ್ವರ್‌ ಗರಂ ಆಗಿದ್ದಾರೆ” ಎಂದರು.

“ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನೂ ಕಾಂಗ್ರೆಸ್‌ ಬ್ರದರ್‌ ಎನ್ನಬಹುದು. ಹೀಗಾದರೆ ಹಿಂದೂಗಳ ಕಥೆ ಏನೆಂದು ಚಿಂತೆಯಾಗುತ್ತದೆ. ಮುಸ್ಲಿಮ್‌ ಮುಖಂಡ ನ್ಯಾಯಾಲಯ ನಂಬಲ್ಲ ಎಂದು ಹೇಳಿದರೆ, ಕಾಂಗ್ರೆಸ್‌ನವರು ಬಾಬಾ ಸಾಹೇಬ್‌ ಅಂಬೇಡ್ಕರರ ಸಂವಿಧಾನದ ಪುಸ್ತಕ ಹಿಡಿದುಕೊಳ್ಳುತ್ತಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ” ಎಂದು ದೂರಿದರು.

ಗುಂಡಿಗಳ ಊರು

“ರಾಜಧಾನಿ ಬೆಂಗಳೂರು ಗುಂಡಿಗಳ ಊರಾಗಿದೆ. ಒಂದೇ ಒಂದು ಗುಂಡಿ ಇಲ್ಲದ ರಸ್ತೆ ನಗರದಲ್ಲಿ ಇಲ್ಲ. ಬಿಬಿಎಂಪಿ ಆಯುಕ್ತರು ಲಕ್ಷಗಟ್ಟಲೆ ಗುಂಡಿ ಇದೆ, ಮುಚ್ಚಿದ್ದೇವೆ ಎನ್ನುತ್ತಾರೆ. ನಂತರ ಮತ್ತೆ ಗುಂಡಿಗಳ ಸಂಖ್ಯೆ ಹೇಳುತ್ತಾರೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಎಷ್ಟು ಅನುದಾನ ಬಿಬಿಎಂಪಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಲಿ. ಅದು ಬಿಟ್ಟು ʼನಮ್ಮ ತೆರಿಗೆ ನಮ್ಮ ಹಕ್ಕುʼ ಎಂದು ಹೇಳುತ್ತಾರೆ. ಹಾಗಾದರೆ ಬೆಂಗಳೂರಿನ ತೆರಿಗೆ ಯಾರ ಹಕ್ಕು? ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 100 ಕೋಟಿ ರೂ. ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.

“ಜಲಮಂಡಳಿ ಅಧ್ಯಕ್ಷರು ಎಲ್ಲ ಶಾಸಕರಿಗೆ ಪತ್ರ ಬರೆದು ದರ ಏರಿಕೆಗೆ ಸಹಕಾರ ನೀಡಲು ಕೋರಿದ್ದಾರೆ. ಹಾಲಿನ ದರ ಹಾಗೂ ಆಲ್ಕೋಹಾಲ್‌ ದರ ಹೆಚ್ಚಳಕ್ಕೆ ಸಿದ್ಧತೆ ನಡೆದಿದೆ. ಅರಣ್ಯ ಸಚಿವರು ನದಿ ನೀರಿಗೂ ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಇನ್ನು ಸಮುದ್ರಕ್ಕೆ ತೆರಿಗೆ ವಿಧಿಸುವುದು ಬಾಕಿ ಇದೆ” ಎಂದು ವ್ಯಂಗ್ಯವಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments