ದಳಪತಿಗಳ ಭದ್ರಕೋಟೆ ಮಾಜಿ ಪ್ರಧಾನಿ ದೇವೇಗೌಡರ ತವರು ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿದ ಶಕ್ತಿ ಪ್ರದರ್ಶನಕ್ಕೆ ತಿರುಗೇಟು ನೀಡಲು ಜೆಡಿಎಸ್ ಸಜ್ಜುಗೊಂಡಿದೆ.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಸೇರಿದಂತೆ ಇತ್ತೀಚೆಗೆ ನಡೆದ ಮೂರು ಉಪಚುನಾವಣೆ ಸೋಲಿನಿಂದ ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರಲ್ಲಿ ಇನ್ನೂ ಹೆಚ್ಚು ಉತ್ಸಾಹವಿದೆ ಎಂಬ ಸಂದೇಶ ರವಾನಿಸುವ ದೃಷ್ಟಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.
ಕೇಂದ್ರ ಕೈಗಾರಿಕೆ ಸಚಿವ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಹೆಸರಿನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಶಕ್ತಿ ಪ್ರದರ್ಶನ ನಡೆಸಲು ಸಜ್ಜುಗೊಂಡಿವೆ.
ಬಿಜೆಪಿ ರಾಷ್ಟ್ರೀಯ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಕಾಂಗ್ರೆಸ್ ಹಾಸನದಲ್ಲಿ ನಡೆಸಿದ ಸಮಾವೇಶವನ್ನು ಮೀರಿಸುವ ರೀತಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆಗಳು ಆರಂಭಗೊಂಡಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮೂಲಕ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಪ್ರಾಬಲ್ಯ ಸಾಧಿಸಲು ಈ ಸಮಾವೇಶದ ಮೂಲಕ ಕಾರ್ಯತಂತ್ರ ರೂಪಿಸಲು ಸಿದ್ದತೆ ನಡೆಯುತ್ತಿದೆ.
ಡಿ.15 ರಂದು ಮಂಡ್ಯದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಗುರಿಯನ್ನು ಜೆಡಿಎಸ್ ನಾಯಕರು ಹೊಂದಿದ್ದಾರೆ. ಆ ಮೂಲಕ ಚನ್ನಪಟ್ಟಣ ಸೋಲಿನ ಹತಾಶೆಯಲ್ಲಿರುವ ಜೆಡಿಎಸ್ ಕಾರ್ಯಕರ್ತರಿಗೆ ಹುರಿದುಂಬಿಸುವ ಹಾಗೂ ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪಕ್ಷಗಳ ಪ್ರಾಬಲ್ಯ ಕುಗ್ಗದಂತೆ, ಗಟ್ಟಿಗೊಳಿಸಲು ಚಿಂತಿಸಲಾಗಿದೆ.