Homeಕರ್ನಾಟಕಮೀಸಲಾತಿ ವಿರುದ್ಧ ವ್ಯವಸ್ಥಿತ ಅಭಿಯಾನ ನಡೆಯುತ್ತಿದೆ: ಬಿ ಕೆ ಹರಿಪ್ರಸಾದ್

ಮೀಸಲಾತಿ ವಿರುದ್ಧ ವ್ಯವಸ್ಥಿತ ಅಭಿಯಾನ ನಡೆಯುತ್ತಿದೆ: ಬಿ ಕೆ ಹರಿಪ್ರಸಾದ್

ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೂ ನಾವು ವರದಿಯನ್ನು ಜಾರಿಗೆ ತಂದೇ ತರುತ್ತೇವೆ. ಏಕೆಂದರೆ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ವರದಿ ಜಾರಿಗೆ ಮತ್ತು ಸಂವಿಧಾನ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.

ದೆಹಲಿಯಲ್ಲಿ ನಡೆದ ‘ದಿ ಕಾಸ್ಟ್ ಸೆನ್ಸೆಸ್, ವೇಮೆನ್ ರೈಟ್ಸ್ ಅಂಡ್ ರೇಸರ್ವೇಶನ್ಸ್; ದಿ ಫಿಲ್ಲರ್ಸ್ ಆಫ್ ಸೋಶಿಯಲ್ ಜಸ್ಟಿಸ್’ 3ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, “ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಎಲ್ಲ ರೀತಿಯಲ್ಲೂ ಫಲ ಉಣ್ಣುತ್ತಿರುವರಿಗೆ ಜಾತಿ ಜನಗಣತಿ ಬಗ್ಗೆ ಭಯವಾಗುತ್ತಿದೆ. ಅದಕ್ಕಾಗಿ ಜಾತಿಜನಗಣತಿ ಬಗ್ಗೆ ಮಾತನಾಡುವವರನ್ನು ‘ಇವರು ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಈ ಅಡೆತಡೆಗಳ ನಡುವೆಯೂ ಜಾತಿಜನಗಣತಿ ವರದಿ ಜಾರಿಯಾಗಲೇಬೇಕು” ಎಂದು ಆಗ್ರಹಿಸಿದರು.

“ಬಹಳ ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ SC, ST ಮತ್ತು OBC ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇಕಡಾ 75ಕ್ಕೆ ಏರಿಸಬೇಕು ಮತ್ತು ಅದಕ್ಕಾಗಿ ಜಾತಿ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಾದಿಸುತ್ತಿದೆ. ಜಾತಿಜನಗಣತಿ ಆಗುವುದಷ್ಟೇ ಮುಖವಲ್ಲ, ಅದು ತಮಿಳುನಾಡು ಮಾದರಿಯಲ್ಲಿ ಸಂವಿಧಾನದ 9ನೇ ಪರಿಚ್ಛೇದ ಸೇರಬೇಕು. ಇಲ್ಲದಿದ್ದರೆ ನ್ಯಾಯಾಲಯ ಅದನ್ನು ಅಸಿಂಧು ಮಾಡುವ ಸಾಧ್ಯತೆ ಇದೆ” ಎಂದರು.

“ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಸಂವಿಧಾನವನ್ನು ಅಭಿವೃದ್ಧಿ ಪಡಿಸುವ ಮತ್ತು ಬಲಪಡಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕಿತ್ತು.ಆದರೆ ನಾವೆಲ್ಲಾ ಈಗ ಸಂವಿಧಾನವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ದುರಾದೃಷ್ಟಕರ. ಮೀಸಲಾತಿ ಎನ್ನುವುದು ಭಿಕ್ಷೆ ಅಲ್ಲ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲ. ಮೀಸಲಾತಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಅಲ್ಲ. ಮೀಸಲಾತಿ ಎಂದರೆ ಸಮಾಜದಲ್ಲಿ ಸಮಾನತೆ ಸಾಧಿಸುವ ಸಾಧನ ಎಂದು ಪರಿಗಣಿಸಬೇಕು. ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇನ್ನೂ ಬಹಳಷ್ಟಿದೆ” ಎಂದು ಹೇಳಿದರು.

“ವಿಪರ್ಯಾಸ ಎಂದರೆ, ಮೀಸಲಾತಿಯನ್ನು ಪ್ರತಿಭೆ ಮತ್ತು ಸಾಮರ್ಥ್ಯದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.ಮೀಸಲಾತಿ ಎನ್ನುವುದು ಶೋಷಿತ ಸಮುದಾಯಗಳಿಗೆ ಸ್ವಲ್ಪ ಮಟ್ಟದ ರಿಯಾಯಿತಿ ನೀಡುತ್ತದೆ. ಮೀಸಲಾತಿಯು ಎಲ್ಲಾ ವರ್ಗಗಳಿಗೆ ನ್ಯಾಯದ ಸಮಾನ ಹಂಚಿಕೆ ಮಾಡುತ್ತದೆ. ಆದ್ದರಿಂದ ಮೀಸಲಾತಿ ಮತ್ತು ಪ್ರತಿಭೆಯನ್ನು ಬೇರ್ಪಡಿಸಿಯೇ ನೋಡಬೇಕಾಗಿದೆ. ಹೀಗಾಗಿ ಮೀಸಲಾತಿ ಹಕ್ಕು ನೀಡುವ ಸಂವಿಧಾನದ ಆರ್ಟಿಕಲ್ 335 ಅನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ” ಎಂದರು.

“ಮೀಸಲಾತಿ ವಿರುದ್ಧ ಬಹಳ ವ್ಯವಸ್ಥಿತವಾದ ಅಭಿಯಾನ ನಡೆಯುತ್ತಿದೆ. ಮೀಸಲಾತಿಯಿಂದ ಪ್ರತಿಭೆ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ. ಸಾಮರ್ಥ್ಯ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವುದಾದರೆ ಅತಿಹೆಚ್ಚು ಅಂದರೆ ಶೇಕಡಾ 69ರಷ್ಟು ಮೀಸಲಾತಿ ನೀಡುವ ತಮಿಳುನಾಡು ನಿರ್ನಾಮವಾಗಬೇಕಿತ್ತು. ಆದರೆ ತಮಿಳುನಾಡು ಇವತ್ತು ಇಡೀ ದೇಶಕ್ಕೆ ಮಾದರಿಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಕೂಡ ಮುಂದೆ ಇದೆ” ಎಂದು ಹೇಳಿದರು.

“ಕರ್ನಾಟಕ ಮೀಸಲಾತಿಯ ಪ್ರವರ್ತಕ ರಾಜ್ಯ. ನಮ್ಮ ರಾಜ್ಯದಲ್ಲಿ 1879ರಲ್ಲೇ ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿಯನ್ನು ನೀಡಲಾಗಿತ್ತು. 1918ರಲ್ಲಿ ಮೈಸೂರು ರಾಜರು SC, ST ಮತ್ತು OBC ವರ್ಗಗಳಿಗೆ ಶೇಕಡಾ 75ರಷ್ಟು ಮೀಸಲಾತಿ ನೀಡಿದ್ದರು. ಮೀಸಲಾತಿಯಿಂದ ಬೆಳವಣಿಗೆ ಇಲ್ಲ ಎನ್ನುವುದಾದರೆ ಕರ್ನಾಟಕದ ಅಭಿವೃದ್ಧಿಯು ಕುಂಠಿತವಾಗಬೇಕಿತ್ತು. ಆದರೆ ಇವತ್ತು ಕರ್ನಾಟಕ ಅತಿಹೆಚ್ಚು ಪ್ರಗತಿ ಹೊಂದಿರುವ ರಾಜ್ಯ ಮತ್ತು ಸಿಲಿಕಾನ್ ವ್ಯಾಲಿ ಇರುವ ಎರಡನೇ ರಾಜ್ಯವಾಗಿದೆ” ಎಂದು ಹರಿಪ್ರಸಾದ್ ತಿಳಿಸಿದರು.

“ಮಹಾತ್ಮಾ ಗಾಂಧಿ, ಗುರುನಾನಕ್, ವಿವೇಕಾನಂದ ಮತ್ತಿತರ ಮಹನೀಯರು ಹಿಂದೂ ಧರ್ಮವನ್ನು ಪಾಲಿಸಿದ್ದಾರೆ. ಆದರೆ ‘ಹಿಂದೂ ರಾಷ್ಟ್ರ’ ಎನ್ನುವುದು ರಾಜಕೀಯ ಪಕ್ಷದ ಘೋಷಣೆಯಷ್ಟೇ. ಸಾವರ್ಕರ್ ನೀಡಿದ ‘ಹಿಂದೂ ರಾಷ್ಟ್ರ’ಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ‘ಹಿಂದೂ ರಾಷ್ಟ್ರ’ದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ‘ಹಿಂದೂ ರಾಷ್ಟ್ರ’ ಎಂದು ಹೇಳುವವರು ಈಗ 100 ವರ್ಷ ಪೂರೈಸುತ್ತಿದ್ದಾರೆ. ಹಾಗಾಗಿ ಅವರೀಗ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎಲ್ಲಾ ರೀತಿಯಲ್ಲೂ ಧಕ್ಕೆ ಉಂಟು ಮಾಡುತ್ತಿದ್ದಾರೆ” ಎಂದು ಹರಿಪ್ರಸಾದ್ ತರಾಟೆಗೆ ತೆಗೆದುಕೊಂಡರು.

“ಬಹಳ ವಿಶೇಷವಾಗಿ ಉತ್ತರ ಭಾರತದ ಹಿಂದುಳಿದ ವರ್ಗಗಳು ಸಂವಿಧಾನವನ್ನು ಉಳಿಸಲು ಮೊದಲು ಮುಂದಾಗಬೇಕು. ಏಕೆಂದರೆ ಪೆರಿಯಾರ್ ರಾಮಸ್ವಾಮಿ ಕಾರಣಕ್ಕೆ ಬಿಜೆಪಿ ತಮಿಳುನಾಡು ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಚಿಂತನೆಗೆ ಆಸ್ಪದವಿಲ್ಲ. ಕೇರಳದಲ್ಲಿ ನಾರಾಯಣಗುರು ಇರುವುದರಿಂದ ಅಲ್ಲೂ ಬಿಜೆಪಿ ಮತ್ತು ಆರ್ ಎಸ್ ಎಸ್ ಬೆಳೆಯಲು ಸಾಧ್ಯವಾಗುವುದಿಲ್ಲ. ಆಂಧ್ರ ಮತ್ತು ತೆಲಗಾಂಣದಲ್ಲಿ ವೇಮನ ಇರುವುದರಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಅಲ್ಲೂ ಜಾಗವಿಲ್ಲ. ಕರ್ನಾಟಕದಲ್ಲಿ ಬಸವಣ್ಣ ಇರುವ ಕಾರಣಕ್ಕೆ ಈಗಲೂ ಬಿಜೆಪಿಗೆ ಎಂದೂ ಬಹುಮತ ಸಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ, ಸಾಹು ಮಹಾರಾಜ್, ಫಾತಿಮಾ ಶೇಕ್ ಇದ್ದರೂ ಅಲ್ಲಿ ಅವರು ಬಹುಮತದ ಹತ್ತಿರಕ್ಕೆ ಬಂದಿದ್ದಾರೆ. ಇದು ಅಪಾಯದ ಮುನ್ಸೂಚನೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments