ಮಹಾರಾಷ್ಟ್ರದ ಎಲ್ಲ 288 ವಿಧಾನಸಭಾ ಕ್ಷೇತ್ರ ಮತ್ತು ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ 38 ಕ್ಷೇತ್ರಗಳಲ್ಲೂ ಬುಧವಾರ (ನ.20) ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.
ಹಾಗೆಯೇ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಹಾಗೂ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಆರಂಭಗೊಂಡಿದ್ದು, ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.
ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ4,136 ಹುರಿಯಾಳುಗಳು ಕಣದಲ್ಲಿದ್ದಾರೆ. ರಾಜ್ಯದ 9.70 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬಿಜೆಪಿ 148, ಕಾಂಗ್ರೆಸ್ 103, ಶಿವಸೇನೆ (ಉದ್ಧವ್ ಬಣ) 89, ಶಿವಸೇನೆ (ಶಿಂಧೆ ಬಣ) 80, ಎನ್ಸಿಪಿ (ಎಸ್ಪಿ ಬಣ) 87, ಎನ್ಸಿಪಿ (ಎಪಿ ಬಣ) 53 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
ಜಾರ್ಖಂಡ್ ವಿಧಾನಸಭೆಯ 38 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ 1.23 ಕೋಟಿ ಮತದಾರರು 55 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 528 ಹರಿಯಾಳುಗಳು ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ‘ಮಹಾಯುತಿ’ ಹಾಗೂ ವಿಪಕ್ಷ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟಗಳ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ವಿಧಾನಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ನವೆಂಬರ್ 23ರಂದು ಮಹಾರಾಷ್ಟ್ರ, ಜಾರ್ಖಂಡ್ ಮತ್ತು 46 ವಿಧಾನಸಭಾ ಕ್ಷೇತ್ರಗಳ ಮತ್ತು ಎರಡು ಲೋಕಸಭಾ ಸ್ಥಾನಗಳ ಉಪಚುನಾವಣೆಯ ಮತ ಎಣಿಕೆ ನಡೆಯಲಿದೆ.
ಮತದಾನ ಮಾಡಲು ಪ್ರಧಾನಿ ಮನವಿ
“ಎಲ್ಲರೂ ಬಂದು ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಆಚರಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
RSS ಮುಖ್ಯಸ್ಥ ಮೋಹನ್ ಭಾಗವತ್ ಮತದಾನ
ಮಹಾರಾಷ್ಟ್ರದ ನಾಗಪುರದಲ್ಲಿ ಮತದಾನ ಮಾಡಿದ ಆರ್ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. “ಎಲ್ಲರೂ ಬಂದು ವೋಟ್ ಮಾಡುವಂತೆ ಮನವಿ ಮಾಡಿದರು. ಮತದಾನ ಎಲ್ಲರ ಹಕ್ಕು ಆಗಿದ್ದು, ಪ್ರತಿಯೊಬ್ಬರೂ ಮತ ಚಲಾಯಿಸಬೇಖು, ನಾನು ಮತದಾನ ಮಾಡುವುದಕ್ಕಾಗಿಯೇ ಉತ್ತರಾಂಚಲದಿಂದ ನಿನ್ನೆ ರಾತ್ರಿ ಬಂದಿರುವೆ” ಎಂದರು.
ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಗ್ಯಾರಂಟಿಗಳ ಅಬ್ಬರ
ಮಹಾರಾಷ್ಟ್ರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರಪೂರ ಉಚಿತ ಹಾಗೂ ಗ್ಯಾರಂಟಿ ಯೋಜನೆ ಘೋಷಣೆ ಮಾಡಿವೆ. ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು, ನಿರುದ್ಯೋಗಿ ಯುವಕರಿಗೆ ಭತ್ಯೆ, ರೈತರ ಸಾಲ ಮನ್ನಾ, ಜಾತಿಗಣತಿ ವಿಷಯ ಸೇರಿದಂತೆ 25ಕ್ಕೂ ಹೆಚ್ಚು ಭರವಸೆಗಳ ಮಹಾಪೂರ ಹರಿಸಿವೆ. ಮತದಾರರ ಪ್ರಭುಗಳು ಯಾರ ಗ್ಯಾರಂಟಿಗೆ ಮತ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.