ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಸಮಿತಿ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು “ನಾನು ಈ ಹಿಂದೆ ಪಕ್ಷದ ಶಿಸ್ತುಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನು ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯ ಬಿದ್ದರೆ ಅಮಾನತು ಸಹ ಮಾಡುತ್ತಿದ್ದೆವು” ಎಂದರು.
ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಚರ್ಚೆ ಆಗಿಲ್ಲ. ಹೀಗಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ನವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಅವರನ್ನು ಕಂಡರೆ ಬಿಜೆಪಿ ಅವರಿಗೆ ಹೊಟ್ಟೆ ಉರಿ” ಎಂದು ಹೇಳಿದರು.
ಬಿಜೆಪಿ ವಿರುದ್ಧದ ಶೇ 40 ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ ಎಂದು ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿ “ಲೋಕಾಯುಕ್ತ ಪೊಲೀಸರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎಂಬುದನ್ನು ನೋಡಬೇಕಿದೆ. ಅಗತ್ಯ ಬಿದ್ದರೆ ಮರು ತನಿಖೆಗೆ ಸಿದ್ಧರಿದ್ದೇವೆ’ ಎಂದರು.
“ಶಾಸಕರ ಖರೀದಿಗೆ ಈಗಲೂ ಬಿಜೆಪಿ ಯತ್ನಿಸುತ್ತಿದೆ. ಈ ವಿಚಾರವಾಗಿ ದಾಖಲೆ ಸಿಕ್ಕರೆ ಅದರ ಬಗ್ಗೆಯೂ ತನಿಖೆ ಮಾಡುತ್ತೇವೆ” ಎಂದು ಹೇಳಿದರು.
40% ಕಮಿಷನ್ ಪ್ರಕರಣ
“ನಾವು ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು. ನಮಗೆ ಅದೇ ದಾಖಲೆ. ಈಗ ಲೋಕಾಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎನ್ನುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ. ಅಗತ್ಯಬಿದ್ದರೆ ಮರುತನಿಖೆಗೆ ಒಳಪಡಿಸಲು ನಾವು ಸಿದ್ಧ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ
ಬೆಂಗಳೂರಿನಲ್ಲಿ ಚಾಕಲೇಟ್ ರೂಪದಲ್ಲಿ ಡ್ರಗ್ಸ್ ಸಿಗುತ್ತಿರುವ ಕುರಿತ ಪ್ರಶ್ನೆಗೆ, “ಡ್ರಗ್ಸ್ ವಿರುದ್ಧ ಕ್ರಮಕ್ಕೆ ಸರ್ಕಾರ ಸಮರ ಸಾರಿದೆ. ಎಲ್ಲೆಡೆ ಕಡಿವಾಣ ಹಾಕಲು ತೀರ್ಮಾನ ಮಾಡಲಾಗಿದೆ. ಶಾಲಾ, ಕಾಲೇಜುಗಳ ಬಳಿ ಡ್ರಗ್ಸ್ ಚಾಕಲೇಟ್ ರೂಪದಲ್ಲಿ ಮಾರಾಟವಾಗುತ್ತಿವೆ ಎಂಬ ಮಾಹಿತಿ ಬಂದರೆ ಕೂಡಲೇ ಮೆಡಿಕಲ್ ಶಾಪ್ಗಳ ಲೈಸನ್ಸ್ ರದ್ದು ಮಾಡಲು ಕ್ರಮ ವಹಿಸಲಾಗುವುದು. ಆನೇಕಲ್ ಭಾಗದಲ್ಲಿ ಪೊಲೀಸರು ಹೆಚ್ಚು ದಾಳಿ ಮಾಡುತ್ತಿದ್ದಾರೆ. ಬೇರೆ ರಾಜ್ಯದಿಂದ ಡ್ರಗ್ಸ್ ಬರುತ್ತಿದ್ದುದನ್ನು ಪೊಲೀಸರು ಹಿಡಿದಿದ್ದಾರೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನು ಹೈ ಕಮಿಷನ್ ಹಾಗೂ ರಾಯಭಾರಿಗಳಿಗೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಏರ್‌ಪೋರ್ಟ್ ಡ್ರಗ್ಸ್ ಮೂಲಕ ಸಿಕ್ಕಾಪಟ್ಟೆ ಬರುತ್ತಿದೆ. ವಿಶಾಖಪಟ್ಟಣದಲ್ಲಿ ಒಂದೂವರೆ ಸಾವಿರ ಕೆ.ಜಿ ಡ್ರಗ್ಸ್ ಹಿಡಿದಿದ್ದಾರೆ” ಎಂದು ಪರಮೇಶ್ವರ್ ಮಾಹಿತಿ ನೀಡಿದರು.