ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬೇರೆ ಸಮಯದಲ್ಲಿ ಹಣ ಸಿಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಮಗನ ಚುನಾವಣೆ ಎಂದು ಸಾಕಷ್ಟು ಗಿಫ್ಟ್ ಪಡೆದಿದ್ದಾರೆ. ಸಾಕಷ್ಟು ಕಂಪನಿ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಮಂಡ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲಲ್ಲ. ಉಪ ಚುನಾವಣೆಯಲ್ಲಿ ದುಡ್ಡಿನಲ್ಲಿ ಅವರ ಜೊತೆ ಫೈಟ್ ಮಾಡಲಾಗಲಿಲ್ಲ. ಹಣದ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ನವರ ಜೊತೆ ಹೋಲಿಕೆ ಸಾಧ್ಯವಿಲ್ಲ. ನಮ್ಮ ಬಳಿ ಹಣವಿಲ್ಲ, ಗ್ಯಾರಂಟಿ ನೀಡಿದ್ದೇವೆ” ಎಂದರು.
“40 ಪರ್ಸೆಂಟ್ ಹಗರಣ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಹೋಯ್ತು. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮತ್ತೆ ಪ್ರಯತ್ನ ಮಾಡುತ್ತಿದೆ” ಎಂದು ದೂರಿದರು.
ಮೈಸೂರಲ್ಲೂ ವಾಗ್ದಾಳಿ
“ಬಾಯಿಗೆ ಬಂದಂತೆ ಮಾತನಾಡಿದರೆ ಕೇಳಿಸಿಕೊಳ್ಳೇಕೆ ನಾವು ಸಿದ್ಧರಿಲ್ಲ, ಸ್ನೇಹಿತರನ್ನು ಬಿಟ್ಟು ಜೆಡಿಎಸ್ ಪಕ್ಷ ಈಗ ಕುಟುಂಬದ ಪಕ್ಷವಾಗಿದೆ. ಇತಿಹಾಸದ ಚರ್ಚೆ ಅವಶ್ಯಕತೆ ಇದ್ದರೆ ಆಹ್ವಾನ ಕೊಡುತ್ತೇನೆ, ವೇದಿಕೆ ಸಿದ್ದಪಡಿಸಲಿ” ಎಂದು ಕುಮಾರಸ್ವಾಮಿಯವರಿಗೆ ಚಲುವರಾಯಸ್ವಾಮಿ ಸವಾಲು ಹಾಕಿದರು.
ಜಮೀರ್ ಹಾಗೂ ಆ ನಾಲ್ವರ ಜೊತೆ ಇದ್ದಿದ್ದು ನನ್ನ ಕರಾಳ ದಿನ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ವಾಗ್ದಾಳಿ ನಡೆಸಿದರು.
“ನನಗೆ ಕುಮಾರಸ್ವಾಮಿಯಂತೆ ಮಾಧ್ಯಮದವರ ಮುಂದೆ ನಾಲಗೆ ಹರಿಬಿಡಲು ಸಾಧ್ಯವಿಲ್ಲ. ಅವರು ಚರ್ಚೆಗೆ ಬರುವುದಾದರೆ ಒಂದು ವೇದಿಕೆ ಸಿದ್ಧಮಾಡಿ. ಯಾರು ಹೊಲಸು, ಕಚಡಾ ಎಂದು ಚರ್ಚೆ ಮಾಡೋಣ. 20 ವರ್ಷ ಅವರ ಜತೆ ಇದ್ದೆವು, ಯಾರು ಸ್ನೇಹ ಬಿಟ್ಟರು ಎಂದು ಚರ್ಚಿಸೋಣ” ಎಂದರು.
“ಸ್ನೇಹಿತರಿಂದಲೇ ಸಿಎಂ ಆದೇ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆಗ ಅದು ಕರಾಳದಿನ ಆಗಿರಲಿಲ್ಲವಾ? ಅಷ್ಟು ದಿನ ಏಕೆ ಕೊಳಚೆ ವಾಸನೆ ಕುಡಿದಿದ್ದರಾ? ಕುಮಾರಸ್ವಾಮಿ ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಉತ್ತರ ಕೊಡುವುದು ಸೂಕ್ತ ಎಂದರೆ ಕೊಡುತ್ತೇನೆ. ಮಾತಿನಿಂದ ಯಾರೂ ದೊಡ್ಡವರು ಆಗುವುದಿಲ್ಲ, ನಡವಳಿಕೆಯಿಂದ ದೊಡ್ಡವರಾಗಬೇಕು” ಎಂದು ಹೇಳಿದರು.
“ಇವರದ್ದು ಕುಟುಂಬದ ಪಕ್ಷ ಆಗಿ ಉಳಿದಿದೆ. ಸಾಕಷ್ಟು ಇತಿಹಾಸ ಇದೆ, ಹೆಗಡೆ, ಜೆ.ಹೆಚ್. ಪಟೇಲ್ ಜೊತೆ ಎಷ್ಟು ದಿನ ಚೆನ್ನಾಗಿದ್ದರು? ಈ ಬಗ್ಗೆ ಅವರೇ ಹೇಳಲಿ, ಸದನದಲ್ಲಿ ಚರ್ಚೆಯಾದರೆ ಒಳ್ಳೆಯದು, ಬರಲು ಹೇಳಿ. ಒಂದು ವೇದಿಕೆ ನಿರ್ಮಾಣ ಮಾಡೋಣಾ, ಒಂದು ಸಮಯ ನಿಗದಿ ಮಾಡಿ. ನಾವು ಬರಲು ತಯಾರಿದ್ದೇವೆ, ಜನರಿಗೂ ಅಸಲಿ ಸಂಗತಿ ಗೊತ್ತಾಗಬೇಕು” ಎಂದರು.