ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಕಚೇರಿ ನೋಟಿಸ್ ಜಾರಿಗೊಳಿಸಿದೆ.
ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಡಿವೈಎಸ್ಪಿ ನೋಟಿಸ್ ನೀಡಿದ್ದಾರೆ. ಇ.ಡಿ ದಾಳಿಯ ಬಳಿಕ ಜಮೀರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿತ್ತು. ಅಕ್ರಮ ಗಳಿಕೆ ಸಂಬಂಧ ತನಿಖೆಗೆ ಇ.ಡಿ ಸೂಚಿಸಿತ್ತು. ಕಳೆದೆರಡು ವರ್ಷದಿಂದ ಲೋಕಾಯುಕ್ತ ತನಿಖೆ ನಡೆಸುತ್ತಿದೆ.
ಈ ಹಿಂದೆ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗಿತ್ತು. ಈಗ ಹಾಜರಾಗಿ ಹೇಳಿಕೆ ದಾಖಲಿಸಲು ನೋಟಿಸ್ ನೀಡಲಾಗಿದೆ. ಯಾವುದೇ ಸಬೂಬು ಹೇಳದೆ ಖುದ್ದು ತಾವೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಜಮೀರ್ ಅವರಿಗೆ ಲೋಕಾಯುಕ್ತ ಪೊಲೀಸರು ಹೇಳಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಮೀಅವರಿಗೆ ಮತ್ತೆ ಪೊಲೀಸರ ತನಿಖೆ ಬಿಸಿ ಎದುರಾಗಿದ್ದು, ತಮ್ಮ ಹಣಕಾಸು ವ್ಯವಹಾರದ ಕುರಿತು ಲೆಕ್ಕವನ್ನು ಲೋಕಾಯುಕ್ತಕ್ಕೆ ಸಚಿವರು ಸಲ್ಲಿಸಬೇಕಿದೆ. ತಮ್ಮ ಮೇಲಿನ ಆದಾಯಕ್ಕೂ ಅಧಿಕ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಸಚಿವರಿಗೆ ಕಾಲಾವಕಾಶ ನೀಡಲಾಗಿದೆ.
ಮೂರು ವಾರ ಸಮಯದಲ್ಲಿ ಅವರು ಪುರಾವೆ ಸಂಗ್ರಹಿಸಿ ಬರಲಿ. ವಿಚಾರಣೆ ವೇಳೆ ಅವರು ನೀಡುವ ಹೇಳಿಕೆ ಹಾಗೂ ಸಲ್ಲಿಸುವ ದಾಖಲೆಗಳನ್ನು ಪರಾಮರ್ಶಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ. ತಪ್ಪು ಮಾಹಿತಿ ನೀಡಿದ್ದರೆ ಲೆಕ್ಕಪರಿಶೋಧನೆ ವೇಳೆ ಸತ್ಯಾಸತ್ಯತೆ ಗೊತ್ತಾಗಲಿದೆ.
ಈ ಹಿಂದೆ ಇದೇ ಪ್ರಕರಣ ವಿಚಾರವಾಗಿ ಜಮೀರ್ ಅವರನ್ನು ಎಸಿಬಿ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು. ಅಲ್ಲದೆ ಸಚಿವರಿಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ ಇನ್ನಿತರ ಸ್ಥಳಗಳ ಮೇಲೆ ಎಸಿಬಿ ದಾಳಿ ಸಹ ನಡೆಸಿ ದಾಖಲೆಗಳನ್ನು ಸಂಗ್ರಹಿಸಿತ್ತು. ತರುವಾಯ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರೆದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು.