ಟಿ20 ಕ್ರಿಕೆಟ್‌ನ ಬಲಿಷ್ಠ ಪಡೆ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಅವರ ತವರು ನೆಲದಲ್ಲೇ ಮಕಾಡೆ ಮಲಗಿಸಿದೆ. ಅದು ಕೂಡ ಅತ್ಯಧಿಕ ರನ್ ಕಲೆಹಾಕಿ, ಅತ್ಯಂತ ಹೀನಾಯವಾಗಿ ಸೋಲಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿದೆ.
ಟೀಂ ಇಂಡಿಯಾ ಶುಕ್ರವಾರ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾಗೆ ಟಿ20 ಕ್ರಿಕೆಟ್‌ನ ವಿಶ್ವರೂಪ ದರ್ಶನ ಮಾಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಜುಕೊಂಡ ಭಾರತ ರನ್ ಗಳ ಪರ್ವತವನ್ನೇ ಕಲೆ ಹಾಕಿತು. ಭಾರತದ ಬ್ಯಾಟರ್ ಗಳ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಅಬ್ಬರದ ಮುಂದೆ ದಕ್ಷಿಣ ಆಫ್ರಿಕಾ ತಂಡದ ಸದಸ್ಯರು ಎಷ್ಟೇ ಬೆವರಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾಗೆ ಸ್ಪೋಟಕ ಆರಂಭ ಒದಗಿಸಿದ್ದರು.
ಸಂಜು ಸ್ಯಾಮ್ಸನ್ ಶತಕ. ಅದರ ಬೆನ್ನಲ್ಲೇ ತಿಲಕ್ ವರ್ಮಾ ಅವರಿಂದಲೂ ಸತತ ಎರಡನೇ ಸೆಂಚುರಿ. ವಾಂಡರರಸ್‌ನಲ್ಲಿ ರನ್‌ಗಳ ಸುರಿಮಳೆ. ಇಬ್ಬರಿಂದಲೂ ಬೌಂಡರಿ- ಸಿಕ್ಸರ್‌ಗಳ ಅಬ್ಬರ. ದ್ವಿಶತಕದ ಜೊತೆಯಾಟ ಮುಂದೆ ದಾಖಲೆಗಳೆಲ್ಲಾ ಧೂಳೀಪಟವಾದವು!
ಮೊದಲ ವಿಕೆಟ್‌ಗೆ 73 ರನ್ ಗಳ ಜೊತೆಯಾಟವಾಡಿ ಅಭಿಷೇಕ್ ಶರ್ಮಾ (36) ಔಟಾದರು. ಆ ಬಳಿಕ ಶುರುವಾಗಿದ್ದೇ ಸ್ಯಾಮ್ಸನ್ – ತಿಲಕ್ ವರ್ಮಾ ಅಬ್ಬರ. ಈ ಜೋಡಿಯು 2ನೇ ವಿಕೆಟ್‌ಗೆ 210 ರನ್‌ಗಳ ಜೊತೆಯಾಟವಾಡಿದರು. ಕೇವಲ 20 ಓವರ್ ಗಳಲ್ಲಿ ರನ್ ಗಳ ಪರ್ವತವೇರಿದ ಟೀಂ ಇಂಡಿಯಾ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಮೂಲಕ 135 ರನ್ ಗಳ ಅಂತರದಿಂದ ಪಂದ್ಯ ಜಯಿಸಿದ ಭಾರತ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು.
ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿ ಕೇವಲ 1 ವಿಕೆಟ್ ಕಳೆದುಕೊಂಡು 283 ರನ್ ಗಳ ಬೃಹತ್ ಮೊತ್ತ ದಾಖಲಿಸಿದರೆ, ರನ್ ಬೆಂಬತ್ತಿ ಹೊರಟ ಆತಿಧೇಯರು 18.2 ಓವರ್ ಗಳಲ್ಲಿ 148 ರನ್ ಗಳಿಗೇ ಸರ್ವಪತನ ಕಂಡರು.
ವಿಶ್ವದಾಖಲೆಯ ಜೊತೆಯಾಟ
ಮುರಿಯದ 2ನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ 210 ರನ್ ಜೊತೆಯಾಟವಾಡಿದರು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 2ನೇ ವಿಕೆಟ್ ಗೆ ವಿಶ್ವದಾಖಲೆಯಾಗಿದೆ. ಈ ಮೊದಲು ನೆದರ್ ಲೆಂಡ್ ನ ಎಂ ಲೆವಿಟ್ ಮತ್ತು ಸೈಬ್ರಾಂಡ್ ಎಂಜೆಲ್ ಬ್ರೆಚ್ ಅವರು ನಮೀಬಿಯಾ ವಿರುದ್ಧ ಹೊಡೆದಿದ್ದ 193 ರನ್ ಈವರೆಗಿನ ವಿಶ್ವದಾಖಲೆಯಾಗಿತ್ತು.