ರಾಜ್ಯದಲ್ಲಿ ಇಂದು (ಬುಧವಾರ, ನ.13) ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.
ಮೂರು ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಮತದಾನ ಆರಂಭಕ್ಕೂ ಮುನ್ನ ಜನ ಉತ್ಸಾಹದ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ.
ಚನ್ನಪಟ್ಟಣ ಕ್ಷೇತ್ರ
ಮೂರು ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ಗೆ ಚನ್ನಪಟ್ಟಣ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿ ಪಿ ಯೋಗೇಶ್ವರ್ ಹಾಗೂ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚನ್ನಪಟ್ಟಣದಲ್ಲಿ ಒಟ್ಟು 2,32,949 ಮತದಾರರಿದ್ದು, ಈ ಪೈಕಿ 1,12,324 ಪುರುಷ ಮತದಾರರು, 1,20,617 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 276 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. ನಗರ ಪ್ರದೇಶದಲ್ಲಿ 62, ಗ್ರಾಮೀಣ ಪ್ರದೇಶದಲ್ಲಿ 214 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 119 ಮತಗಟ್ಟೆಗಳನ್ನ ಸೂಕ್ಷ್ಮ ಮತಗಟ್ಟೆಗಳು ಎಂದು ನಿರ್ಧರಿಸಲಾಗಿದೆ. 8 ವಿಶೇಷ ಮತಗಟ್ಟೆ, 5 ಸಖಿ ಮತಗಟ್ಟೆ, ವಿಶೇಷ ಚೇತನರಿಗಾಗಿ 1 ಮತಗಟ್ಟೆ, 1 ಯುವ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ. 54 ಕ್ಲಸ್ಟರ್ ಮತಗಟ್ಟೆಗಳಿಗೆ ಎಎಸ್ಐ ದರ್ಜೆಯ ಅಧಿಕಾರಿಗಳ ನೇಮಕ ಮಾಡಲಾಗಿದೆ. 8 ಪ್ಯಾರಾಮಿಲಿಟರಿ ಪಡೆ, ಪಿಆರ್ಒ, ಎಪಿಆರ್ಒ ಸೇರಿದಂತೆ 1252 ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಶಿಗ್ಗಾಂವಿ ಕ್ಷೇತ್ರ
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಸೇರಿ ಅಂತಿಮ ಕಣದಲ್ಲಿದ್ದಾರೆ. ಇವರ ಜೊತೆ 8 ಅಭ್ಯರ್ಥಿಗಳಿದ್ದಾರೆ. ಇಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.
ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತಗಳಿವೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ 92 ಮತಗಟ್ಟೆಗಳು ಸೂಕ್ಷ್ಮವೆಂದು ಗುರ್ತಿಸಲಾಗಿದೆ. ಓರ್ವ ಎಎಸ್ಪಿ, ನಾಲ್ವರು ಡಿವೈಎಸ್ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ ಸೇರಿ 716 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಸಂಡೂರು ಕ್ಷೇತ್ರ
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರಾ ಹಣಾಹಣಿ ನಡೆದಿದೆ. ಒಟ್ಟಾರೆ 7 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 55 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 1,215 ಸಿಬ್ಬಂದಿ, ಮೂವರು ಡಿವೈಎಸ್ಪಿ, 6 ಸಿಪಿಐ, 14 ಪಿಎಸ್ಐ, 22 ಎಎಸ್ಐ, 193 ಹೆಡ್ಕಾನ್ಸ್ಟೇಬಲ್, 14 ಕೆಎಸ್ಆರ್ಪಿ ತುಕಡಿ ಸೇರಿ 1500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.