ಗ್ಯಾಂಗ್ ಕಟ್ಟಿಕೊಂಡು ಕಳ್ಳತನ, ದರೋಡೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಗರ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್ ಫಹೀಮ್ ಅಲಿಯಾಸ್ ಎಟಿಎಂನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ನಟೋರಿಯಸ್ ಆಗಿದ್ದ ಆತನ ಮನೆಯನ್ನು ಬುಲ್ಡೋಜರ್ನಿಂದ ಉತ್ತರ ಪ್ರದೇಶ ಸರ್ಕಾರ
ನೆಲಸಮ ಮಾಡಿದೆ. ಕಳ್ಳತನ, ದರೋಡೆ ಗ್ಯಾಂಗ್ನ ಮಾಸ್ಟರ್ ಮೈಂಡ್ ಆಗಿದ್ದ ಫಹೀಮ್ ಗ್ಯಾಂಗ್ನ ಇಬ್ಬರನ್ನು ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ನಟೋರಿಯಸ್ ಫಹೀಮ್ ಗ್ಯಾಂಗ್ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ, ಉತ್ತರ ಪ್ರದೇಶದ ವಿವಿಧ ನಗರಗಳೂ ಸೇರಿದಂತೆ ದೇಶದಾದ್ಯಂತ ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾಗಿದ್ದ. ಈತನಿಗಾಗಿ ಬೆಂಗಳೂರು ಪೊಲೀಸರು ಮಾತ್ರವಲ್ಲದೆ, ವಿವಿಧ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಈ ಹಿಂದೆ ಅಪರಾಧ ಪ್ರರಕಣದಲ್ಲಿ ಜೈಲು ಸೇರಿದ್ದ ಫಹೀಮ್ ಪೆರೋಲ್ ಮೇಲೆ ಹೊರಬಂದಿದ್ದ. ಪೆರೋಲ್ ಮೇಲೆ ಹೊರಗಿದ್ದಾಗಲೇ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದ.
ವೈದ್ಯರ ಮನೆ ಕಳ್ಳತನ
“ಏಪ್ರಿಲ್ 24 ರಂದು ಫಹೀಮ್ ಗ್ಯಾಂಗ್ ಮುಸುಕುಧಾರಿಗಳಾಗಿ ಬಂದು ಸಹಕಾರನಗರದ ವೈದ್ಯ ಡಾ. ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿತ್ತು. ಕಳ್ಳತನದ ಬಗ್ಗೆ ಅರಿವಾಗಿ ಪ್ರಶ್ನಿಸಲು ಬಂದ ವೈದ್ಯರಿಗೆ ಗನ್ ತೋರಿಸಿ ಬೆದರಿಸಿ ಗ್ಯಾಂಗ್ ಪರಾರಿಯಾಗಿತ್ತು.
ಈ ಪ್ರಕರಣದಲ್ಲಿ ಫಹೀಮ್ ಎ1 ಆರೋಪಿಯಾಗಿದ್ದಾನೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಈತನ ಬಂಧನಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಲೆ ಬೀಸಿದ್ದರು. ಘಟನೆ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಿದ್ದರು. ಆದರೆ, ಫಹೀಮ್ ಮಾತ್ರ ಬೆಂಗಳೂರು ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ.
ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಫಹೀಮ್ನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಮನೆಯನ್ನೂ ನೆಲಸಮಗೊಳಿಸಿದ್ದಾರೆ.ಈತನ ಬಂಧನದಿಂದ ದೇಶಾದ್ಯಂತ 65 ಪ್ರಕರಣಗಳ ತನಿಖೆ ಚುರುಕುಗೊಳ್ಳಲಿವೆ. ಫಹೀಮ್ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಕೊಡಿಗಹಳ್ಳಿ ಪೊಲೀಸರು ಮುಂದಾಗಿದ್ದಾರೆ.