ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಜಾಮೀನು ಅರ್ಜಿ ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು (ನ.11) ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮನೆ ಕೆಲಸದಾಕೆ ನೀಡಿರುವ ದೂರಿನ ಅನ್ವಯ ಅತ್ಯಾಚಾರದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ನಿಯಮಿತ ಜಾಮೀನು ಕೋರಿದ್ದರು. ಇದರಲ್ಲಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮೊದಲನೇ ಆರೋಪಿ ಜೆಡಿಎಸ್‌ನ ಶಾಸಕ ಮತ್ತು ಪ್ರಜ್ವಲ್ ಅವರ ತಂದೆಯೂ ಆದ ಎಚ್.ಡಿ.ರೇವಣ್ಣ ಈಗಾಗಲೇ ಜಾಮೀನು ಪಡೆದಿದ್ದಾರೆ.
ಅಕ್ಟೋಬರ್ 21ರಂದು ಜಾಮೀನು ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕೋರ್ಟ್, “ಮೇಲ್ನೋಟಕ್ಕೆ ಪ್ರಜ್ವಲ್ ಒಬ್ಬ ಲಂಪಟ ಹಾಗೂ ತನ್ನ ಇಂದ್ರಿಯಗಳ ಮೇಲಿನ ನಿಯಂತ್ರಣ ಕಳೆದುಕೊಂಡು, ಕಾಮಾತುರನಾಗಿ ವರ್ತಿಸಿದ್ದು, ಈ ನೀಚತನದ ಕೃತ್ಯಗಳು ಸ್ವಸ್ಥ ಸಮಾಜದ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುವಂತಿದೆ” ಎಂದು ವ್ಯಕ್ತಪಡಿಸಿತ್ತು.