ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿನ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್ (45) ಬಂಧನವಾಗಿದ್ದಾರೆ.
ಶಿಲ್ಪಿ ಕೃಷ್ಣ ನಾಯಕ್ ನಕಲಿ ಮೂರ್ತಿ ನಿರ್ಮಿಸಿದ್ದಾರೆಂದು ನಲ್ಲೂರಿನ ಕೃಷ್ಣ ಶೆಟ್ಟಿ ಎಂಬುವುರು ದೂರು ನೀಡಿದ್ದರು. ಕೃಷ್ಣಶೆಟ್ಟಿ ಅವರ ದೂರು ಆಧರಿಸಿ ಕಾರ್ಕಳ ಪೊಲೀಸರು ಪುದುಚೇರಿಯ ಮಾಹೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನ್ಯಾಯಾಲಯದಲ್ಲಿ ಕೃಷ್ಣ ನಾಯಕ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು. ಅಂದಿನಿಂದ ಕೃಷ್ಣ ನಾಯಕ್ ತಲೆಮರೆಸಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಿಸಲಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ ಮೂರ್ತಿ ಲೋಕಾರ್ಪಣೆ ಮಾಡಿದ್ದರು. ಬಳಿಕ, ಕೆಲ ದಿನಗಳ ಕಾಲ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.
ಇದು ಜನರಿಗೆ ಅನುಮಾನ ಬರುವಂತೆ ಮಾಡಿತ್ತು. ಹೀಗಾಗಿ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಲಾಗಿದೆ ಎಂದು ಆರೋಪ ತಿಳಿದು ಬಂದಿತ್ತು. ಇದಾದ ನಂತರ ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿದ್ದ ಪರಶುರಾಮನ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.
ಪರಶುರಾಮ್ ಥೀಮ್ ಪಾರ್ಕ್ ಅಕ್ರಮ ಪ್ರಕರಣದ ಬಗ್ಗೆ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿ ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಗೆ ಅಡ್ಡಿ ಉಂಟು ಮಾಡುವ ಮತ್ತು ಹಸ್ತಕ್ಷೇಪ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಈಗಾಗಲೇ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಅಮಾನತು ಮಾಡಿದ್ದಾರೆ.