ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಯುವಕನೋರ್ವ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಖಾನಾಪುರ ತಾಲೂಕಿನ ಹಲಶಿ ಗ್ರಾಮದ ಅಲ್ತಾಫ್ ಮಕಾನದಾರ(30) ಬಂದೂಕಿನ ಗುಂಡಿಗೆ ಬಲಿಯಾದ ಯುವಕ.
ಮೃತದೇಹವನ್ನುಈತನ ಮನೆಗೆ ತೆಗೆದುಕೊಂಡು ಹೋಗಿರುವುದು ಸಂಶಯಕ್ಕೆ ಕಾರಣವಾಗಿದ್ದು, ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.
ಅಲ್ತಾಫ್ ಕೆಲವು ಜನರೊಂದಿಗೆ ಮರಳು ತೆಗೆಯಲು ಹೋಗಿದ್ದನು. ಈ ವೇಳೆ ಅಲ್ತಾಫನಿಗೆ ಗುಂಡು ತಗುಲಿದೆ. ಗುಂಡಿನ ದಾಳಿಗೆ ಅಲ್ತಾಫ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪರಿಚಿತರು ಹಾರಿಸಿದ ಗುಂಡಿಗೆ ಅಲ್ತಾಫ್ ಮೃತಪಟ್ಟಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸರು ವರಿಷ್ಠಾಧಿಕಾರಿ ಶೃತಿ, ರವಿ ನಾಯಕ, ನಂದಗಡ ಸಿಪಿಐ ಎಸ್.ಸಿ. ಪಾಟೀಲ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.