ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲು ವಯಸ್ಸಿನ ಮಿತಿ ವಿಧಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಇದಕ್ಕೆ ಕನಿಷ್ಠ 16 ವರ್ಷದ ವಯೋ ಮಿತಿ ನಿಗದಿಪಡಿಸಿದ್ದು, ಶೀಘ್ರವೇ ಈ ಕುರಿತ ಮಸೂದೆ ಮಂಡಿಸಲಾಗುತ್ತದೆ ಎಂದು ಪ್ರಧಾನಿ ಆ್ಯಂಟೊನಿ ಅಲ್ಪನೀಸ್ ಹೇಳಿದ್ದಾರೆ.
ನ.18ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ಈ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಇದಕ್ಕೆ ಅನುಮತಿ ಸಿಕ್ಕರೆ 12 ತಿಂಗಳ ಬಳಿಕ ಇದು ಕಾನೂನಾಗಿ ಜಾರಿಗೆ ಬರಲಿದೆ. ಟೆಕ್ಟಾಕ್, ಫೇಸ್ಬುಕ್, ಇನ್ಸ್ಟಾಗ್ರಾಂ ಟ್ವಿಟರ್ಗಳಿಗೆ ಈಗಾಗಲೇ ನಿಯಮ ರೂಪಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಮಂದಿ ಪೋಷಕರ ಜತೆ ನಾನು ಮಾತನಾಡಿದ್ದೇನೆ. ಅವರು ಸಹ ನನ್ನಂತೆ ಮಕ್ಕಳ ಬಗ್ಗೆ ಭೀತಿಗೊಳಗಾಗಿದ್ದರು. 16 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ನೋಡಿಕೊಳ್ಳುವುದು ಜಾಲತಾಣಗಳ ಕರ್ತವ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವು ನಿಯಮಗಳನ್ನು ರೂಪಿಸಬೇಕು. ತಪ್ಪಿದರೆ ದಂಡ ವಿಧಿಸಲಾಗುತ್ತದೆ” ಎಂದು ಅಲ್ಪನೀಸ್ ಹೇಳಿದ್ದಾರೆ.