ನಾಡಿನ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಕಲಬುರಗಿಯ ಸ್ವಾಜಾ ಬಂದೇ ನವಾಜ್ ದರ್ಗಾದ (ಕೆಬಿಎನ್) ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ (79) ಅವರು ನ.6ರ ಬುಧವಾರ ತಡರಾತ್ರಿ ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಅಲ್ಲದೆ ಸಂಸ್ಥಾಪಕರಾಗಿದ್ದರು. ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಖಾಜಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು.
ಡಿಸಿಎಂ ಡಿ ಕೆ ಶಿವಕುಮಾರ್ ಸಂತಾಪ
ಹೈದರಾಬಾದ್ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ನಡೆಸಿದ ಸೂಫಿ ಸಂತರಾದ ಸೈಯದ್ ಶಹಾ ಖುಸ್ರೋ ಹುಸೇನಿ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
“ಸೈಯದ್ ಶಹಾ ಖುಸ್ರೋ ಹುಸೇನಿ ಅವರು ಅನೇಕ ವಿದ್ಯಾಸಂಸ್ಥೆಗಳನ್ನು ಆರಂಭಿಸಿ, ಅದರಲ್ಲೂ ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿ ಅಕ್ಷರ ದಾಸೋಹ ಸೇವೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. 1972ರಿಂದಲೇ ಕೆಬಿಎನ್ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಅವರು, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು” ಎಂದು ಬಣ್ಣಿಸಿದ್ದಾರೆ.
“ಮಹಿಳೆಯರ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದ ಸೈಯದ್ ಶಹಾ ಖುಸ್ರೋ ಹುಸೇನಿ ಮಹಿಳೆಯರಿಗಾಗಿಯೇ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೇಬಿಕ್ ಭಾಷೆಯ ಕಾಲೇಜುಗಳನ್ನು ಪ್ರಾರಂಭಿಸಿದ್ದರು. ಧರ್ಮ ಹಾಗೂ ಸಮಾಜದ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟ ಸೈಯದ್ ಶಹಾ ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಬಂಧು, ಮಿತ್ರರು, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.