2025ರ ವೇಳೆಗೆ ಸುಮಾರು 30 ಕಿಮೀ ಹಾಗೂ 2026ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮೆಟ್ರೋ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ ( ಬೆಂಗಳೂರು ಅಂತರರಾಷ್ಟ್ರೀಯ ಮತ್ತು ಪ್ರದರ್ಶನ ಕೇಂದ್ರ)ದ ತನಕ ವಿಸ್ತರಣೆ ಮಾಡಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೋ ರೈಲು ಸಂಚಾರವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಬುಧವಾರದಂದು ಪರಿಶೀಲನೆ ಮಾಡಿದರು.
ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಅವರ ಜೊತೆ ಯಶವಂತರಪುರ ಮೆಟ್ರೋ ರೈಲು ನಿಲ್ದಾಣದಿಂದ ಮಾದಾವರದ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮೆಟ್ರೋ ಮೂರನೇ ಹಂತಕ್ಕೆ ಒಪ್ಪಿಗೆ
“ಈಗಾಗಲೇ ₹ 1,130 ಕೋಟಿ ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೋ ಮಾರ್ಗದ ಒಂದು ಹಾಗೂ ಎರಡನೇ ಹಂತಗಳನ್ನು ನಾವು ಪೂರ್ಣಗೊಳಿಸಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ” ಎಂದರು.
ಶೀಘ್ರ ಅಧಿಕೃತ ಉದ್ಘಾಟನೆ
“ನಾಗಸಂದ್ರದಿಂದ ಮೂರು ಕಿಮೀ ದೂರವಿರುವ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ವಿಸ್ತರಿತ ನೂತನ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರೇ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು” ಎಂದು ತಿಳಿಸಿದರು.
ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ವಿಚಾರಣೆಗೆ ಹಾಜರು
“ಉಪ ಚುನಾವಣೆ ಇರುವ ಕಾರಣಕ್ಕೆ ಸಿದ್ದರಾಮಯ್ಯ ಅವರು ಒಂದು ವಾರಗಳ ಕಾಲಾವಕಾಶ ಕೇಳಬಹುದಿತ್ತು. ಆದರೆ, ಅಧಿಕಾರದಲ್ಲಿದ್ದುಕೊಂಡು ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.
“ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಅವರು ಮುಡಾ ವಿಚಾರದಲ್ಲಿ ತಪ್ಪು ಮಾಡಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಯಾವುದೇ ಸಹಿ ಹಾಕಿಲ್ಲ, ಮಂಜೂರು ಮಾಡಿಲ್ಲ. ಲೋಕಾಯುಕ್ತದವರು ವಿಚಾರಣೆಗೆ ಕರೆದ ಕಾರಣಕ್ಕೆ ಹಾಜರಾಗಿದ್ದಾರೆ” ಎಂದರು.
ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ದೂರು ರಾಜಕೀಯ ಬಣ್ಣ
ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ರಾಜ್ಯಪಾಲರಿಗೆ ರಾಜ್ಯದ ಬಾರ್ ಮಾಲೀಕರು ದೂರು ನೀಡಿರುವ ಬಗ್ಗೆ ಕೇಳಿದಾಗ, “ಆಡಳಿತಾತ್ಮಕ ವಿಚಾರದಲ್ಲಿ ಯಾರು ಬೇಕಾದರೂ ರಾಜ್ಯಪಾಲರಿಗೆ ದೂರನ್ನು ನೀಡಬಹುದು. ಈ ಹಿಂದೆಯೂ ನೂರಾರು ದೂರುಗಳು ಬಂದಿದ್ದವು. ಈಗ ಇದೆಲ್ಲಾ ವಿಶೇಷವಾಗಿ ನಡೆಯುತ್ತಿದ್ದು, ಇದೊಂದು ರಾಜಕೀಯ ಬಣ್ಣ” ಎಂದು ಹೇಳಿದರು.
ಕಾನೂನಿನ ಪ್ರಕಾರ ಕ್ರಮ
ಬೆಳಗಾವಿಯ ಎಸ್ ಡಿಎ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂದಿರುವ ಬಗ್ಗೆ ಕೇಳಿದಾಗ ” ಯಾರೇ ತಪ್ಪು ಮಾಡಿದ್ದರು ಪೊಲೀಸ್ ಇಲಾಖೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.