ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಮನೋಜ್ ಜಾರಂಗೆ ಪಾಟೀಲ್ ಮಹಾರಾಷ್ಟ್ರ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
10-15 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿ ಒಂದು ದಿನದ ನಂತರ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ತಮ್ಮ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಮನೋಜ್ ಮನವಿ ಮಾಡಿದ್ದಾರೆ.
ಸೋಮವಾರ ಜಾಲ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಈ ನಿರ್ಧಾರದ ಹಿಂದೆ ಯಾವುದೇ ಒತ್ತಡವಿಲ್ಲ. ಮೀಸಲಾತಿ ಕುರಿತ ನಮ್ಮ ಅಭಿಯಾನ ಮುಂದುವರಿಯುತ್ತದೆ” ಎಂದು ತಿಳಿಸಿದ್ದಾರೆ.
“ಮುಸ್ಲಿಂ ಮತ್ತು ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಚಿಸಿದ್ದೆವು. ಆದರೆ, ಒಂದು ಜಾತಿಯ ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ. ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂದು ಜನರೇ ನಿರ್ಧರಿಸಲಿ. ಯಾವುದೇ ಅಭ್ಯರ್ಥಿಯನ್ನು ನಾವು ಬೆಂಬಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.