ಒಳ ಮೀಸಲಾತಿ ಜಾರಿ ವಿಚಾರವಾಗಿ ತೆಗೆದುಕೊಂಡ ತೀರ್ಮಾನ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅವಹೇಳನ ಮಾಡಲಾಗಿರುವ ಆರೋಪದ ಮೇಲೆ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೆಪಿಸಿಸಿ ಸಂಯೋಜಕ ಸತೀಶ್ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಒಳಮೀಸಲಾತಿ ಹೋರಾಟ ಸಮಿತಿ ವಿಜಯನಗರ ಜಿಲ್ಲೆ’ ಎಂಬ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಖಂಡಿಸಲಾಗಿದೆ. ಅಲ್ಲದೇ ನಿಂದನಾತ್ಮಕ ಬರಹಗಳನ್ನು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಹರಿಯಬಿಡಲಾಗಿದೆ.
ಮುಖ್ಯಮಂತ್ರಿ ಅವರನ್ನು ನಿಂದಿಸಿ ಬರೆದಿರುವುದು ಮಾಜಿ ಸಚಿವ ಎಚ್.ಆಂಜನೇಯ ಅವರ ಗಮನಕ್ಕೂ ಬಂದಿದೆ. ಸಮಾಜದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಬರಹ ಬರೆದು ಹರಿಯಬಿಡಲಾಗಿದೆ ಎಂದು ಸತೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.