ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮೈಸೂರು ಮತ್ತು ಬೆಂಗಳೂರಿನ ಹಲವೆಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.
ಬೆಂಗಳೂರಿನ ನಗರದ ಡಾಲರ್ಸ್ ಕಾಲೋನಿ, ಸ್ಯಾಂಕಿ ರಸ್ತೆಯ ಬಿಲ್ಡರ್ಸ್ ನಿವಾಸದ ಮೇಲೆ ಹಾಗೂ ಜೆಪಿ ನಗರದಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿವಾಸಿಗಳು ಮೇಲೆ ದಾಳಿ ನಡೆಸಿ ನಿವೇಶನ ಹಂಚಿಕೆಯ ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಪರಿಶೀಲಿಸುತ್ತಿದ್ದಾರೆ.
ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಿನೇಶ್ ಕುಮಾರ್ ತಮ್ಮ ಮನೆಯ ಸಮೀಪ ಬೆಳಗಿನ ವಾಯು ವಿಹಾರ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಮ್ಮ ಮನೆಯ ಮೇಲೆ ಇ.ಡಿ ದಾಳಿ ಮಾಡಿರುವ ವಿಷಯ ತಿಳಿದ ತಕ್ಷಣವೇ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ ಟಿ ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆ ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು.
ದಾಖಲೆಗಳು ವಶ
ಹಲವು ಗಂಟೆಗಳ ಕಾಲ ಅಧಿಕಾರಿಗಳು ಗುತ್ತಿಗೆದಾರರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪತ್ರ ಪರಿಶೀಲನೆ ನಡೆಸಿರುವ ಇ.ಡಿ ಅಧಿಕಾರಿಗಳು ಕೆಲವೊಂದು ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಅ.18 ರಂದು ಮೈಸೂರು ಕಚೇರಿ ಮೇಲೆ ಎರಡು ದಿನಗಳ ಕಾಲ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನು ಜಪ್ತಿ ಮಾಡಿ ಅವುಗಳನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ ಕಾಣೆಯಾಗಿರುವ ಹಾಗೂ ವೈಟ್ನರ್ ಹಚ್ಚಿರುವ ದಾಖಲೆ ಪತ್ರಗಳನ್ನು ಮೂಲವನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮುಡಾ ಹಗರಣ ಸಂಬಂಧ ಇಡಿ ಸ್ನೇಹಮಯಿ ಕೃಷ್ಣ ಅವರಿಗೆ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಅದರಂತೆ ಸ್ನೇಹಮಯಿ ಕೃಷ್ಣ ಶಾಂತಿನಗರದ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ ಹಗರಣ ಸಂಬಂಧ 500 ಪುಟಗಳ ದಾಖೆಯನ್ನು ಇ.ಡಿಗೆ ನೀಡಿದ್ದರು.
ದಾಖಲೆಗಳ ಆಧಾರದ ಮೇಲೆ ಇ.ಡಿ ಇಸಿಐಆರ್ ದಾಖಲಿಸಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಹಗರಣದಲ್ಲಿ ದೇವರಾಜು ಎ4 ಆಗಿರುವ ಭೂ ಮಾಲೀಕ ಕೆಂಗೇರಿಯಲ್ಲಿರುವ ದೇವರಾಜು ನಿವಾಸದಲ್ಲಿ ಇ.ಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು.
ಗಂಗರಾಜು ವಿಚಾರಣೆ
ಈ ನಡುವೆ ಮುಡಾದಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಬಗ್ಗೆ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ನೋಟಿಸ್ ಜಾರಿಗೊಳಿಸಿ ಸೋಮವಾರ ನಗರದ ಕಚೇರಿಗೆ ಕರೆಸಿಕೊಂಡ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ 20 ಗುಂಟೆ ಜಾಗ ಖರೀದಿ ವಿಚಾರವಾಗಿ ದಾಖಲೆ ಪತ್ರಗಳನ್ನು ಗಂಗರಾಜು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
“ಹಿನಕಲ್ ನಿವೇಶನ ಹಂಚಿಕೆ ಅಕ್ರಮ ಸೇರಿ ಹಲವು ದೂರು ನೀಡಿದ್ದು ಅದರಂತೆ ಇ.ಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ” ಎಂದು ಗಂಗರಾಜು ತಿಳಿಸಿದ್ದಾರೆ.


