ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಪದಾಧಿಕಾರಿಗಳು ಮತ್ತು ನಾನಾ ಸಮುದಾಯಗಳ ಮುಖಂಡರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ “ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ”ಯನ್ನು ಜಾರಿಗೊಳಿಸಲು ಒತ್ತಾಯಿಸಿದರು.
ಮಹಾಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದ ನಿಯೋಗದಲ್ಲಿ ಮಾಜಿ ಸಚಿವೆ ಬಿ. ಟಿ ಲಲಿತ್ ನಾಯ್ಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು, ಮಾಜಿ ಶಾಸಕ
ನೇ ಲ ನರೇಂದ್ರಬಾಬು, ಮಾವಳ್ಳಿ ಶಂಕರ್, ಸಿ. ನಂಜಪ್ಪ, ಜೆ. ಹನುಮಂತಪ್ಪ ಚಿಂತಕರಾದ ಡಾ. ಎಸ್. ಜಾಫೇಟ್, ಅಬ್ದುಲ್ ಮನಸೇರರ್, ಅನಂತ್ ನಾಯ್ಕ್ ಸೇರಿದಂತೆ ನೂರಾರು ಜನ ಇದ್ದರು.
“ಮಹಾ ಒಕ್ಕೂಟದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಉಪಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಸಚಿವ ಸಂಪುಟದಲ್ಲಿ ವರದಿ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಮನವಿ ಪತ್ರ ಹೀಗಿದೆ..
ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಶ
ಎಣಿಸುವ ಅಗತ್ಯವಿಲ್ಲ. ಸುಮಾರು 159 ಕೋಟಿ ರೂ ಗಳನ್ನು ಖರ್ಚು ಮಾಡಿ ತಯಾರಿಸಿರುವ ಈ
ವರದಿಯು ತಕ್ಷಣ ಫಲಪ್ರದ ಆಗಬೇಕು.
ಕರ್ನಾಟಕ 12ನೇ ಶತಮಾನದಲ್ಲೇ ಸಮಸಮಾಜವನ್ನು ಪ್ರತಿಪಾದಿಸಿದ ರಾಜ್ಯ. ಇಲ್ಲಿ ನಾಲ್ವಡಿ
ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿ ಮಾಡಲಾಗಿತ್ತು.
ದಿವಂಗತ ದೇವರಾಜ ಅರಸು ಅವರು ‘ಹಾವನೂರು ಆಯೋಗ’ ರಚಿಸಿ ಹಿಂದುಳಿದ ವರ್ಗಗಳ
ಅಧ್ಯಯನಕ್ಕೆ ಮುನ್ನುಡಿ ಬರೆದರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಮೀಸಲಾತಿ
ಮಿತಿಯನ್ನು ಶೇಕಡಾ 73ಕ್ಕೆ ಏರಿಸುವ ಪ್ರಯತ್ನ ಮಾಡಿದ್ದರು. ಹೀಗೆ ಲಗಾಯತ್ತಿನಿಂದಲೂ ಸಾಮಾಜಿಕ
ನ್ಯಾಯದ ಪರವಾಗಿರುವ ಕರ್ನಾಟಕ ಈಗ ಜಾತಿ ಜನಗಣತಿ ಅಥವಾ ರಾಜ್ಯದ ಎಲ್ಲಾ ಜಾತಿಗಳ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಕ್ಷಾ ವರದಿಯನ್ನು
ತಯಾರಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ.
ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಳಿಗೆ ಅವರ
ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗದ ಅವಕಾಶಗಳು ಮತ್ತು
ವಿದ್ಯಾಭ್ಯಾಸದ ಅವಕಾಶಗಳು ಲಭಿಸಿಲ್ಲ. ಅಹಿಂದ ವರ್ಗಗಗಳಲ್ಲಿ ಅರಿವು ಮತ್ತು ಸಂಘಟನೆಯ
ಕೊರತೆಯ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ ಎನ್ನುವುದರ ಜೊತೆಗೆ ನಿರ್ಧಿಷ್ಟವಾಗಿ ಅವರ
ಜನಸಂಖ್ಯಾ, ಪರಿಸ್ಥಿತಿ ಗೊತ್ತಿಲ್ಲದಿರುವುದು ಕೂಡ ಪ್ರಮುಖ ಕಾರಣವಾಗಿದೆ.

ಜಾತಿ ಜನಗಣತಿಯ ವರದಿ ಬಂದರೆ ಜಾತಿಗಳ ವಸ್ತುಸ್ಥಿತಿ ತಿಳಿಯಲಿದೆ. ಅದಕ್ಕೆ ಪೂರಕವಾಗಿ ಸರ್ಕಾರಗಳು
ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಮೀಸಲಾತಿಯ ಪರಿಷ್ಕರಣೆ ಅಥವಾ ಯಾರಿಗಾದರೂ ಮೀಸಲಾತಿ ನೀಡಬೇಕಾದಲ್ಲಿ ಸಾಂವಿಧಾನಿಕ ಆಯೋಗದ ದತ್ತಾಂಶವನ್ನು ಸುಪ್ರೀಂ ಕೋರ್ಟ್ ಕೇಳುತ್ತಾ ಬರುತ್ತಿದೆ.
ಇದು ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿಯಿಂದ ಹಿಡಿದು ಹಲವಾರು ಪ್ರಕರಣಗಳಲ್ಲಿ
ಕಂಡುಬಂದಿದೆ. ಹಿರಿಯ ನ್ಯಾಯವಾದಿ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ಶಾಶ್ವತ ಹಿಂದುಳಿದ
ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಗೆ ಅಂಕಿ-ಅಂಶಗಳನ್ನೂ ಸಂಗ್ರಹಿಸಿದ ವಿಧಾನವನ್ನು ತಜ್ಞರ
ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ.
ದಮನಿತ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಮತ್ತು ಸಾಮಾಜಿಕ ನ್ಯಾಯದ ಪರ ಇರುವ ತಾವು ವರದಿಯನ್ನು ಒಪ್ಪಿ, ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು. ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ ‘ನಾವು ನುಡೆದಂತೆ ನಡೆಯುವವರು ಎನ್ನುವುದನ್ನು ಸಾಬೀತು ಮಾಡಬೇಕು.
ಸರ್ಕಾರ ವರದಿಯನ್ನು ಮಂಡಿಸಿದ ನಂತರ ಆಕ್ಷೇಪ ಸಲ್ಲಿಸಲು ಒಪ್ಪಬೇಕೋ-ಬೇಡವೋ ಎಂಬುದನ್ನು ನಿರ್ಧರಿಸುವುದು ಸಂಪುಟ ಸಭೆ/ ಶಾಸನ ಸಭೆಯ ಅಧಿಕಾರ. ಆದರೆ ಸಂಪುಟ ಸಭೆಯಲ್ಲಿ ಮಂಡಿಸಲೇಬಾರದು ಎಂಬುದು ಗೂಂಡಾ ಪ್ರವೃತ್ತಿ ಮತ್ತು ಸರ್ವಾಧಿಕಾರಿ ಧೋರಣೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಜೊಳ್ಳು ಬೆದರಿಕೆಗೆ ತಲೆ ಕೆಡಿಸಿಕೊಳ್ಳದೆ ಸಿದ್ದರಾಮಯ್ಯ ನವರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು.
ಸಮಸ್ತ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು ತಮ್ಮ ಬೆನ್ನಿಗೆ ಇದ್ದೇವೆ. ಸಾಂವಿಧಾನಿಕ ಕ್ರಮ ಜರುಗಿಸಲು
ಮುಂದಾಗಬೇಕೆಂದು ಒತ್ತಾಯಿಸುತ್ತೇವೆ.
ಹಕ್ಕೊತ್ತಾಯಗಳು
1.ಕರ್ನಾಟಕ ಸರ್ಕಾರದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾನ್ಯ ಕಾಂತರಾಜ್
ಅವರ ನೇತ್ರತ್ವದಲ್ಲಿ ಸಮೀಕ್ಷೆ ಮಾಡಿ, ಮಾನ್ಯ ಜಯಪ್ರಕಾಶ್ ಹೆಗಡೆಯವರು ರಾಜ್ಯ
ಸರ್ಕಾರಕ್ಕೆ ಸಲ್ಲಿಸಿರುವ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ” ಯನ್ನು ರಾಜ್ಯ
ಸರ್ಕಾರ ಸಚಿವ ಸಂಪುಟದಲ್ಲಿ ಮಂಡಿಸಿ ಅಂಗೀಕರಿಸಿ, ಅನುಮೋದಿಸಿ, ಜಾರಿಗೆ ತರಬೇಕು.
2.ರಾಜ್ಯದಲ್ಲಿ ಚಾಲ್ತಿಯಿರುವ ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇಕಡಾ 75 ಕ್ಕೆ
ವಿಸ್ತರಿಸಬೇಕು. ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಮೀಸಲಾತಿಯನ್ನು
ಹೆಚ್ಚಿಸಬೇಕು.
3.ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ
ನೇಮಕಾತಿಯಲ್ಲಿ ಮೀಸಲಾತಿ ನೀತಿ ಜಾರಿಗೆ ತರಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ
ಸರ್ಕಾರವನ್ನು ಸೂಕ್ತ ರೀತಿಯಲ್ಲಿ ಒತ್ತಾಯಿಸಬೇಕು.
4.ವಿಧಾನಸಭೆ, ಲೋಕಸಭೆಗಳಲ್ಲಿ ಯಂತಹ ಶಾಸನ ಸಭೆಗಳಲ್ಲಿ ಹಿಂದುಳಿದ ವರ್ಗಗಳಿಗೆ
ಮೀಸಲಾತಿ ಕಲ್ಲಿಸಬೇಕು. ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ
ಕಲ್ಪಿಸಬೇಕು. ಈ ಕುರಿತು ಕೇಂದ್ರದ ಮೇಲೆ ಒತ್ತಡ ಹಾಕಬೇಕು.
5.ಕರ್ನಾಟಕದ ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತರಲು ಕಾನೂನು ರೂಪಿಸಬೇಕು.
6.ಕೇಂದ್ರ ಸರ್ಕಾರ ಲ್ಯಾಟರಲ್ ಎಂಟ್ರಿ ಇತ್ಯಾದಿ ಅಕ್ರಮ ಮಾರ್ಗಗಳ ಮೂಲಕ ಶೋಷಿತ
ಸಮುದಾಯಗಳಿಗೆ ನೇಮಕಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ತಕ್ಷಣ ಕೇಂದ್ರದ ಬ್ಯಾಕ್
ಲಾಗ್ ಹುದ್ದೆಯನ್ನು ಭರ್ತಿ ಮಾಡಲು ಒತ್ತಡ ಹಾಕಬೇಕು.
7.ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳಲ್ಲಿ ಖಾಲಿಯಿರುವ
ಹುದ್ದೆಗಳನ್ನು ಭರ್ತಿ ಮಾಡಬೇಕು. ಹಿಂದುಳಿದವರಿಗೂ ಬ್ಯಾಕ್ ಹುದ್ದೆ ಭರ್ತಿ ಮಾಡಲು
ಕ್ರಮವಹಿಸಬೇಕು.
ಈ ಹಕ್ಕೊತ್ತಾಯ ಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಶೋಷಿತ
ಸಮುದಾಯಗಳ ಜನತೆ ಮತ್ತು ಸಂಘ ಸಂಸ್ಥೆಗಳು ಒತ್ತಾಯಿಸುತ್ತೇವೆ. ನವಂಬರ್ ತಿಂಗಳ ಮೊದಲ
ವಾರದ ಒಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೊಳಿಸದಿದ್ದಲ್ಲಿ ರಾಜ್ಯ ಸರ್ಕಾರದ
ವಿರುದ್ಧ ತೀವ್ರವಾದ ಹೋರಾಟವನ್ನು ಮಾಡುತ್ತೇವೆ.