Homeಕರ್ನಾಟಕಕಟ್ಟಡ ದುರಂತ | ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಕಟ್ಟಡ ದುರಂತ | ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಬೆಂಗಳೂರಿನ ಹೆಣ್ಣೂರು ಸಮೀಪದ ಬಾಬುಸಾಪಾಳ್ಯದಲ್ಲಿ ಕುಸಿದಿರುವ ಬಹು ಅಂತಸ್ತಿನ ಕಟ್ಟಡದಲ್ಲಿ ಎಂಟು ಕಾರ್ಮಿಕರು ಸಾವನ್ನಪ್ಪಿದ್ದು, ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, “ಮೃತ ಕಾರ್ಮಿಕರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ ಎಂದಿದ್ದಾರೆ. ಜತೆಗೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ” ಎಂದು ಪ್ರಾರ್ಥಿಸಿದ್ದಾರೆ.

ಬಹುಮಹಡಿ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿದ್ದ ಹಾಗೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದ ಸಂಗತಿ ಪೊಲೀಸ್‌ ತನಿಖೆಯಲ್ಲಿ ದೃಢಪಟ್ಟಿದೆ. ಪ್ರಕರಣ ಸಂಬಂಧ ಪಾಲಿಕೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ತಲೆದಂಡವಾಗಿದೆ. ಇದರ ಬೆನ್ನಲ್ಲೇ ಕಟ್ಟಡದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಬಾಬುಸಾಬ್‌ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನಲ್ಲಿ ಅನಧಿಕೃತವಾಗಿ ಹಾಗೂ ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸುತ್ತಿದ್ದು, ಬಿಬಿಎಂಪಿ ಕಾಯಿದೆ 2020ರ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಬೇಕೆಂದು ಪಾಲಿಕೆಯ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ (ಎಇಇ) ಕೆ ವಿನಯ್‌ ನೋಟಿಸ್‌ ನೀಡಿದ್ದರು.

ಆದರೆ, ಸ್ಥಿರೀಕರಣ ಆದೇಶ ಹೊರಡಿಸಿದ ಬಳಿಕ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ವಿನಯ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಕಟ್ಟಡ ಕುಸಿದು 8 ಮಂದಿ ಕಾರ್ಮಿಕರ ಸಾವಿಗೆ ಮೇಲ್ನೋಟಕ್ಕೆ ಕಾರಣವಾಗಿರುವ ವಿನಯ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಿಬಿಎಂಪಿ ಉಪ ಆಯುಕ್ತರು (ಆಡಳಿತ) ಆದೇಶ ಹೊರಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments