Homeಕರ್ನಾಟಕಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ, ಐದು ಸ್ಥಳ ಫೈನಲ್‌: ಸಚಿವ ಎಂ ಬಿ ಪಾಟೀಲ

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ, ಐದು ಸ್ಥಳ ಫೈನಲ್‌: ಸಚಿವ ಎಂ ಬಿ ಪಾಟೀಲ

ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಾಗಿದೆ. ಇದಕ್ಕಾಗಿ ಸರಕಾರವು ಐದು ಸ್ಥಳಗಳನ್ನು ಗುರುತಿಸಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತಿಯಲ್ಲಿ ತಮ್ಮ ಕಚೇರಿಯಲ್ಲಿ ಕರೆದಿದ್ದ ಮಹತ್ವದ ಸಭೆಯ ನಂತರ ಮಾಧ್ಯಮಗಳಿಗೆ ಈ ವಿಚಾರ ಹೇಳಿ, ” ಐದು ಜಾಗಗಳ ಪೈಕಿ ಯಾವುದನ್ನೂ ಆಖೈರು ಮಾಡಿಲ್ಲ. ಈ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಸೇರಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು” ಎಂದರು.

“ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವ ವರದಿಗಳಿಗೆ ಆಧಾರವಿಲ್ಲ. ಡಾಬಸಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸುತ್ತು ಸಭೆ ಸೇರಿ, ಸ್ಥಳವನ್ನು ಆಖೈರುಗೊಳಿಸಲಾಗುವುದು” ಎಂದು ವಿವರಿಸಿದರು.

“ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವಲ್ಲಿ ಯಾರಿಗೂ ರಾಜಕೀಯ ಹಿತಾಸಕ್ತಿಗಳೇನಿಲ್ಲ. ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲವಷ್ಟೇ ಇಲ್ಲಿ ಮುಖ್ಯ. ಇದರಿಂದ ನಮ್ಮ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಇದರ ಜೊತೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಿಮವಾಗಿ ಬೆಂಗಳೂರು ನಗರವು ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದಷ್ಟೇ ಸರಕಾರದ ಗುರಿಯಾಗಿದೆ. ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ. ಬೆಂಗಳೂರಿನ ಸುತ್ತಮುತ್ತಲೂ ಜಾಗವಿದ್ದು, ಇದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲಾಗುವುದು” ಎಂದು ಹೇಳಿದರು.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್ ಮಂಜುಳಾ, ಕೆಐಎಡಿಬಿ ಸಿಇಒ ಡಾ.ಮಹೇಶ, ಸೇರಿದಂತೆ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments