ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲಾ, ಕಾಲೇಜು, ಐಟಿ, ಬಿಟಿ ಸಂಸ್ಥೆಗಳು, ಕಾರ್ಖಾನೆಗಳು ಇತರೇ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲರೂ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡದ ಧ್ವಜಾರೋಹಣ ಮಾಡುವ ಮೂಲಕ ಆಚರಿಸಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಈ ವಿಚಾರ ತಿಳಿಸಿದರು.
“ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಮಹತ್ವ ತಿಳಿಸಲು, ಸರ್ಕಾರಿ ಹಾಗೂ ಖಾಸಗಿ ಶಾಲೆ ಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಮಂದಿ ರಾಜ್ಯದ ಹೊರಗಿನವರು. ಅವರುಗಳು ಕನ್ನಡ ಕಲಿಯಲು ಅವಕಾಶ ಕಲ್ಪಿಸಬೇಕಿದೆ. ಈ ದೃಷ್ಟಿಯಿಂದ ವಿಜಯದಶಮಿ ದಿನದಂದು ಈ ತೀರ್ಮಾನ ಪ್ರಕಟಿಸುತ್ತಿದ್ದೇನೆ” ಎಂದರು.
“ಐಟಿ, ಬಿಟಿ ಹಾಗೂ ಕಾರ್ಖಾನೆಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡದಿದ್ದರೂ, ಕನ್ನಡ ಬಾವುಟ ಹಾರಿಸಿ ರಾಜ್ಯೋತ್ಸವ ಆಚರಿಸಬೇಕು. ರಾಜ್ಯೋತ್ಸವ ಆಚರಣೆ ಮಾಡುವ ಸಂಸ್ಥೆಗಳು ಬಿಬಿಎಂಪಿಯಿಂದ ನೀಡುವ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ಫೋಟೋಗಳನ್ನು ರವಾನಿಸಬೇಕು” ಎಂದು ತಿಳಿಸಿದರು.
“ಈ ಬಾರಿ ರಾಜ್ಯದೆಲ್ಲೆಡೆ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡ ಕಲಿಯಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಈ ತೀರ್ಮಾನ ಪ್ರಕಟಿಸುತ್ತಿದ್ದೇನೆ” ಎಂದು ತಿಳಿಸಿದರು.
ಬೆದರಿಕೆ ಹಾಕಿದರೆ ಕಾನೂನು ಕ್ರಮ
“ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಹೀಗಾಗಿ ಯಾವುದೇ ಕನ್ನಡಪರ ಸಂಘಟನೆ ಅಥವಾ ಇತರರು ಯಾವುದೇ ಸಂಸ್ಥೆಗೆ ಆಚರಣೆ ಬಗ್ಗೆ ಬೆದರಿಕೆ ಹಾಕುವಂತಿಲ್ಲ. ತೊಂದರೆ ನೀಡುವಂತಿಲ್ಲ. ಒಂದು ವೇಳೆ ತೊಂದರೆ ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ” ಎಂದು ಎಚ್ಚರಿಕೆ ನೀಡಿದರು.
ನಿಮ್ಮ ನೇತೃತ್ವದಲ್ಲಿ ಕೊರೋನಾ ಹಗರಣ ತನಿಖೆಗೆ ಉಪ ಸಮಿತಿ ರಚನೆಯಾಗಿದ್ದು, ಯಾವಾಗಿನಿಂದ ತನಿಖೆ ಆರಂಭಿಸುತ್ತೀರಿ ಎಂದು ಕೇಳಿದಾಗ, “ಗುರುವಾರದಂದು ಈ ಬಗ್ಗೆ ತೀರ್ಮಾನವಾಗಿದೆ. ಮುಂದೆ ಈ ಬಗ್ಗೆ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.
ಕೇಂದ್ರದಿಂದ ಜಿಎಸ್‌ಟಿ ಪಾಲು ಹಂಚಿಕೆ ಬಗ್ಗೆ ಕೇಳಿದಾಗ, “ವಿಜಯದಶಮಿ ನಂತರ ಈ ವಿಚಾರವಾಗಿ ಮಾತನಾಡುತ್ತೇನೆ” ಎಂದು ತಿಳಿಸಿದರು.
ರಾಜ್ಯದ ಜನತೆಗೆ ವಿಜಯ ದಶಮಿ ಶುಭಾಶಯಗಳು
“ಕರ್ನಾಟಕ ರಾಜ್ಯದ ಜನತೆಗೆ ವಿಜಯ ದಶಮಿ ಹಬ್ಬದ ಶುಭಾಶಯಗಳು. ಈ ಬಾರಿ ಮೈಸೂರು ದಸರಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಮೈಸೂರು ದಸರಾ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದುಬಂದಿದೆ. ಮೈಸೂರು ದಸರಾ ವೀಕ್ಷಣೆಗೆ ಆಗಮಿಸಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು” ಎಂದು ಶುಭ ಕೋರಿದರು.