Homeಕರ್ನಾಟಕನುಡಿ ನಮನ | ಆಡಂಬರವಿಲ್ಲದೇ ಸಂತನಂತೆ ಬದುಕಿದ ಕೈಗಾರಿಕೋದ್ಯಮಿ ರತನ್‌ ಟಾಟಾ

ನುಡಿ ನಮನ | ಆಡಂಬರವಿಲ್ಲದೇ ಸಂತನಂತೆ ಬದುಕಿದ ಕೈಗಾರಿಕೋದ್ಯಮಿ ರತನ್‌ ಟಾಟಾ

ರತನ್ ಟಾಟಾ ಅವರ ದೂರದೃಷ್ಟಿ ಮತ್ತು ಕನಸುಗಳಿಂದ ಟಾಟಾ ಸಮೂಹ ಬಹುರಾಷ್ಟ್ರೀಯ ಕಂಪನಿಯಾಗಿ ಜಾಗತಿಕ ಮಟ್ಟದಲ್ಲೂ ಸಾಮ್ರಾಜ್ಯ ವಿಸ್ತರಿಸಿದೆ.

ಉಪ್ಪಿನಿಂದ ಉಕ್ಕಿನವರೆಗೆ, ಏರ್‌ಪಿನ್‌ನಿಂದ ಏರೋಪ್ಲೇನ್‌ವರೆಗೆ ಟಾಟಾ ಮುಟ್ಟದೇ ಇರುವ ಕ್ಷೇತ್ರವೇ ಇಲ್ಲ. ಹಾಗೆಯೇ ತಾವು ಕೈಇಟ್ಟ ಕ್ಷೇತ್ರದಲ್ಲಿ ಕಾಪಾಡಿಕೊಂಡ ನೈತಿಕತೆ, ವಿಶ್ವಾಸಾರ್ಹತೆಯಿಂದಲೇ ‘ಟಾಟಾ’ ಬ್ರಾಂಡ್‌ ಆಗಿ ಟಾಟಾ ಸಮೂಹ ತನ್ನ ಛಾಪು ಮೂಡಿಸಿದೆ.

1868 ಭಾರತವು ತನ್ನ ಆರ್ಥಿಕತೆಯನ್ನು ತೆರೆದ ವರ್ಷ. ಸಣ್ಣ ಜವಳಿ ಮತ್ತು ವ್ಯಾಪಾರ ಸಂಸ್ಥೆಯಾಗಿ ಪ್ರಾರಂಭವಾದ ಟಾಟಾ ಸಂಸ್ಥೆಯನ್ನು ಉಪ್ಪಿನಿಂದ ಉಕ್ಕಿನವರೆಗೆ, ಕಾರುಗಳಿಂದ ಸಾಫ್ಟ್‌ವೇರ್, ವಿದ್ಯುತ್‌ ಸ್ಥಾವರಗಳ ಕಾರ್ಯಾಚರಣೆ, ವಿಮಾನಯಾನ ಸೇವೆಯೊಂದಿಗೆ ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿತು. ಇಂದು ಜಗತ್ತಿನ ದೊಡ್ಡ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷರಾಗಿ ರತನ್ ಟಾಟಾ ಅವರು ಎರಡು ದಶಕ ಉದ್ಯಮ ಸಾಮ್ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ರತನ್‌ ಟಾಟಾ ಜೀವನ

ರತನ್ ಟಾಟಾ ಅವರು ತಮ್ಮ ಕುಟುಂಬ ಉದ್ಯಮ ಸಾರಥ್ಯವನ್ನು ವಹಿಸಿಕೊಳ್ಳುವುದಕ್ಕೂ ಮೊದಲು ನ್ಯೂಯಾರ್ಕ್‌ನ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ 1962ರಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಬಿ ಎಸ್‌ ಪದವಿ ಪಡೆದರು. ಆರಂಭದ ದಿನಗಳಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡಿದ್ದರು. 1971ರಲ್ಲಿ ನ್ಯಾಷನಲ್ ರೇಡಿಯೊ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು ಟಾಟಾ ಸಮೂಹದ ಹಲವಾರು ವ್ಯವಹಾರಗಳಲ್ಲಿ ಅನುಭವವನ್ನು ಪಡೆದುಕೊಂಡಿದ್ದರು. ಟಾಟಾ ಸಮೂಹದ ಉಸ್ತುವಾರಿಯನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವಹಿಸಿದ್ದ ಅವರ ಚಿಕ್ಕಪ್ಪ ಜೆಆರ್‌ಡಿ ಟಾಟಾ ಅವರಿಂದ ರತನ್‌ ಟಾಟಾ ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ 1991ರಲ್ಲಿ ಅಧಿಕಾರ ವಹಿಸಿಕೊಂಡರು.

ಒಂದು ದಶಕದ ನಂತರ ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಚುಕ್ಕಾಣಿ ವಹಿಸಿಕೊಂಡರು. ಅಂದಾಜು ನೂರು ವರ್ಷಗಳ ಹಿಂದೆ ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಈ ಸಮೂಹವನ್ನು 2012ರವರೆಗೆ ಅಧ್ಯಕ್ಷರಾಗಿ ಮುನ್ನಡೆಸಿದರು.

“ಕಾರು ತಯಾರಿಕೆ ಗೊತ್ತಿಲ್ಲವೆಂದಮೇಲೆ, ಪ್ರಯಾಣಿಕ ಕಾರುಗಳ ತಯಾರಿಕಾ ಘಟಕವನ್ನು ಏಕೆ ಆರಂಭಿಸಿದಿರಿ…?” ಎಂದು ಹೇಳಿದ್ದ ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್‌ನ ಬಿಲ್‌ ಅವರ ಮಾತಿಗೆ, ರತನ್ ಟಾಟಾ ಅವರು 9 ವರ್ಷಗಳ ನಂತರ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದರು.

ಅವಮಾನಿಸಿದ ಫೋರ್ಡ್ ವಿರುದ್ಧ ತಮ್ಮದೇ ಶೈಲಿಯಲ್ಲಿ ಟಾಟಾ ಉತ್ತರ

1998ರಲ್ಲಿ ರತನ್‌ ಟಾಟಾ ಅವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಕಾರು ತಯಾರಿಕಾ ಜಗತ್ತಿಗೆ ಇಂಡಿಕಾ ಎಂಬ ಹ್ಯಾಚ್‌ಬ್ಯಾಕ್‌ ಮೂಲಕ ಪದಾರ್ಪಣೆ ಮಾಡಿದ್ದರು. ಇದು ಭಾರತ ಮೂಲದ ಮೊದಲ ಡೀಸಲ್‌ ಚಾಲಿತ ಹ್ಯಾಚ್‌ಬ್ಯಾಕ್‌ ಕಾರಾಗಿತ್ತು. ಕಾರುಗಳ ಮಾರಾಟ ನಿರೀಕ್ಷಿಸಿದಷ್ಟು ಆಗಿರಲಿಲ್ಲ. ಆಗ, ಟಾಟಾ ಮೋಟಾರ್ಸ್‌ ಕಂಪನಿಯನ್ನು ಅಮೆರಿಕದ ದಿಗ್ಗಜ ಫೋರ್ಡ್‌ಗೆ ಮಾರಾಟ ಮಾಡಲು ರತನ್ ನಿರ್ಧರಿಸಿದ್ದರು. ಘಟಕ ನೋಡಲು 1999ರಲ್ಲಿ ಫೋರ್ಡ್‌ ಕಂಪನಿಯ ಅಧಿಕಾರಿಗಳು ಮುಂಬೈಗೆ ಬಂದಿದ್ದರು. ನಂತರ ರತನ್ ಟಾಟಾ ಅವರು ಡೆಟ್ರಾಯ್ಟ್‌ಗೆ ತೆರಳಿ ಫೋರ್ಡ್ ಬಿಲ್‌ ಅವರನ್ನು ಭೇಟಿಯಾದರು.

ಸುದೀರ್ಘ ಮೂರು ಗಂಟೆಗಳ ಸಭೆಯಲ್ಲಿ ಬಿಲ್‌ ಅವರ ಚುಚ್ಚು ಮಾತುಗಳು ರತನ್‌ ಅವರ ಆತ್ಮಗೌರವವನ್ನು ಇರಿದಿದ್ದವು. ಡೆಟ್ರಾಯ್ಟ್‌ನಿಂದ ನ್ಯೂಯಾರ್ಕ್‌ ವರೆಗಿನ 90 ನಿಮಿಷಗಳ ಪ್ರಯಾಣದಲ್ಲಿ ರತನ್‌ ಒಂದು ಮಾತನ್ನೂ ಆಡಲಿಲ್ಲ. ಸ್ವದೇಶಕ್ಕೆ ಮರಳಿದವರೇ, ಕಂಪನಿಯನ್ನು ಮಾರಾಟ ಮಾಡದಿರಲು ನಿರ್ಧರಿಸಿದರು. ಬದಲಿಗೆ ಟಾಟಾ ಮೋಟಾರ್ಸ್‌ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವತ್ತ ಯೋಜನೆ ರೂಪಿಸಿದರು.

ಅಲ್ಲಿಂದ ಸುಮಾರು ಒಂಬತ್ತು ವರ್ಷಗಳ ನಂತರ, 2008ರಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆ ಆರಂಭವಾಗಿತ್ತು. ತೀವ್ರ ನಷ್ಟ ಅನುಭವಿಸಿದ್ದ ಪೋರ್ಡ್‌, ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿತ್ತು. ಆದರೆ ಆ ಹೊತ್ತಿಗೆ ಟಾಟಾ ಮೋಟಾರ್ಸ್‌ ಉತ್ತಮ ಹಾದಿಯಲ್ಲಿತ್ತು. ಫೋರ್ಡ್ ಕಂಪನಿಯು ತಮ್ಮ ಒಡೆತದಲ್ಲಿದ್ದ ಬ್ರಿಟಿಷ್‌ ಕಾರು ಕಂಪನಿ ಜಾಗ್ವಾರ್ ಮತ್ತು ಲ್ಯಾಂಡ್‌ರೋವರ್‌ ಅನ್ನು ಮಾರಾಟಕ್ಕಿಟ್ಟಿತ್ತು. 2.3 ಶತಕೋಟಿ ಅಮೆರಿಕನ್ ಡಾಲರ್ (₹19,300 ಕೋಟಿ) ಮೊತ್ತಕ್ಕೆ ಟಾಟಾ ಖರೀದಿಸಿತು. ದಿವಾಳಿಯಿಂದ ರಕ್ಷಿಸಿದ ರತನ್‌ ಟಾಟಾಗೆ ಬಿಲ್ ಫೋರ್ಡ್‌ ಧನ್ಯವಾದ ಹೇಳಿದ್ದರು. ರತನ್ ಅವರು ಅದನ್ನು ನಮ್ರತೆಯಿಂದಲೇ ಸ್ವೀಕರಿಸಿ, 9 ವರ್ಷಗಳ ಹಿಂದಿನ ಅವಮಾನಕ್ಕೆ ನೆರವಿನ ಮೂಲಕವೇ ಸೇಡು ತೀರಿಸಿಕೊಂಡಿದ್ದರು.

ರತನ್‌ ಟಾಟಾ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಟಾಟಾ ಸಮೂಹದಿಂದ ಜನೋಪಕಾರಿ ಕೆಲಸಗಳಿಗಾಗಿ ಟಾಟಾ ಟ್ರಸ್ಟ್‌ ಕೂಡ ನಡೆಸುತ್ತಿದ್ದು, ಇದರ ಚಟುವಟಿಕೆಗಳಲ್ಲಿ ರತನ್‌ ಟಾಟಾ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಂತನಂತೆ ಬದುಕಿದ ಉದ್ಯಮದ ದಿಗ್ಗಜ ಇವರು. ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರೂ ರತನ್‌ ಟಾಟಾ ಅವರು ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸಲಿಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ 30 ಕಂಪನಿಗಳನ್ನು ನಿಭಾಯಿಸುತ್ತಿದ್ದರು. ಆಡಂಬರವಿಲ್ಲದ, ಸಂತನಂತಹ ಬದುಕು ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments