ದೃಶ್ಯ ಮಾಧ್ಯಮದ ಒಳ ಹೊರಗುಗಳನ್ನು ಅಪಾರವಾಗಿ ಬಲ್ಲವರಾಗಿದ್ದ ಸೆಲ್ವಂ ಅವರ ದೂರ ದೃಷ್ಟಿಯ ಪರಿಣಾಮ ಉದಯ ಟಿವಿ ಕನ್ನಡದ ಕಸ್ತೂರಿ ಯಾಗಿ ನಾಡಿನೆಲ್ಲೆಡೆ ಕಂಪನ್ನು ಬೀರಿತು. ಮುರಸೋಳಿ ಸೆಲ್ವಂ ಅವರದ್ದು ದೈತ್ಯ ಪ್ರತಿಭೆ. ಬದುಕು ಬರಹ ಎಲ್ಲದರಲ್ಲೂ ಅತ್ಯಂತ ಸರಳತೆ ಮತ್ತು ವಿನಯತೆಯನ್ನು ಮೈಗೂಡಿಸಿಕೊಂಡಿದ್ದ ಸೆಲ್ವಂ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆದರೆ ಅವರು ಬಿಟ್ಟು ಹೋಗಿರುವ ಸಾಧನೆಯ ಶಿಖರಗಳು ಚಿರಂಜೀವಿಯಾಗಿವೆ.
ಉದಯ ಟಿವಿ ಇದು ಕನ್ನಡ ಕಸ್ತೂರಿ ಎಂದು ಸುಮಾರು ಎರಡೂವರೆ ದಶಕಗಳ ಹಿಂದೆ ಟಿವಿ ಪರದೆಯ ಮೇಲೆ ಕಂಗೊಳಿಸಿದ ಕನ್ನಡದ ಮೊಟ್ಟ ಮೊದಲ ಉಪಗ್ರಹ ವಾಹಿನಿ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಅಂದು ಕನ್ನಡ ಕಸ್ತೂರಿ ಎಂದು ಆರಂಭಗೊಂಡ ಉದಯ ಟಿವಿ ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಅಂದು ಶಿವಾಜಿನಗರ ಬಸ್ ಸ್ಟಾಂಡ್ ಸಮೀಪದ ಪುಟ್ಟ ಕಚೇರಿಯೊಂದರಲ್ಲಿ ಆರಂಭಗೊಂಡ ಈ ವಾಹಿನಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಅಪಾರ ಕೊಡುಗೆ ನೀಡಿದ್ದು ಮುರುಸೋಳಿ ಸೆಲ್ವಂ.
ಉದಯ ಟಿವಿ ಅಧ್ಯಕ್ಷರಾಗಿದ್ದ ಅವರ ವೃತ್ತಿಪರತೆ, ಎಲ್ಲರನ್ನೂ ಒಳಗೊಳ್ಳುವ ಸ್ನೇಹಮಯ ವ್ಯಕ್ತಿತ್ವ, ಅತ್ಯುನ್ನತ ಹುದ್ದೆಯಲ್ಲಿದ್ದರೂ ಅಪಾರ ಶ್ರೀಮಂತರಾಗಿದ್ದರೂ ಎನಗಿಂತ ಕಿರಿಯರಿಲ್ಲ ಎಂದು ಎಲ್ಲರೊಂದಿಗೆ ಬೆರತು ಒಂದಾಗುವ ಪ್ರವೃತ್ತಿ.
ದೃಶ್ಯ ಮಾಧ್ಯಮದ ಒಳ ಹೊರಗುಗಳನ್ನು ಅಪಾರವಾಗಿ ಬಲ್ಲವರಾಗಿದ್ದ ಸೆಲ್ವಂ ಅವರ ದೂರ ದೃಷ್ಟಿಯ ಪರಿಣಾಮ ಉದಯ ಟಿವಿ ಕನ್ನಡದ ಕಸ್ತೂರಿ ಯಾಗಿ ನಾಡಿನೆಲ್ಲೆಡೆ ಕಂಪನ್ನು ಬೀರಿತು. ಮುರಸೋಳಿ ಸೆಲ್ವಂ ಅವರದ್ದು ದೈತ್ಯ ಪ್ರತಿಭೆ. ಉದಯ ಟಿವಿ ಕಟ್ಟುವ ಮುನ್ನವೇ ಶಾಂಭವಿ, ಭೈರವಿ ,ದುರ್ಗಾ ಶಕ್ತಿ ಇವೆ ಮೊದಲಾದ ಹಲವು ಕನ್ನಡದ ಸಿನಿಮಾಗಳನ್ನು ನಿರ್ಮಿಸಿ ಕನ್ನಡಮ್ಮನ ಸೇವೆ ಮಾಡಿದವರು.
ನಟ ನಿರ್ಮಾಪಕ ದ್ವಾರಕೀಶ್, ರೆಬಲ್ ಸ್ಟಾರ್ ಅಂಬರೀಶ್ ಪ್ರಣಯರಾಜ ಶ್ರೀನಾಥ್ ಸೇರಿದಂತೆ ಹಲವು ಖ್ಯಾತನಾಮರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸೆಲ್ವಂ ಅವರು ಉದಯ ಟಿವಿ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಮುಂಗಾರು ಮಳೆ ಗಣೇಶ್, ರಮೇಶ್ ಅರವಿಂದ್, ಹರ್ಷೀಕಾ ಪೂಣಚ್ಚ ರಂಗಿತರಂಗದ ಭಂಡಾರಿ ಕುಟುಂಬ ಶೈಲಜಾ ನಾಗ್ ಸೇರಿದಂತೆ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದರು.
ಕನ್ನಡ ಚಿತ್ರರಂಗದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಅವರು ಅತ್ಯಂತ ಸಂಕಷ್ಟದ ಸಮಯದಲ್ಲಿದ್ದಾಗ ಅವರ ಜೊತೆಯಲ್ಲಿ ನಿಂತು ಆಪ್ತಮಿತ್ರ ಸಿನಿಮಾ ತಯಾರಾಗುವಂತೆ ಮಾಡಿದರು. ಉದಯ ಟಿವಿ ಸುದ್ದಿ ವಿಭಾಗಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟ ದೃಷ್ಟಿಕೋನದ ಮೂಲಕ ಮಾರ್ಗದರ್ಶನ ಮಾಡುತ್ತಿದ್ದ ಸೆಲ್ವಂ ಅವರು ಎಂದಿಗೂ ಸುದ್ದಿಯನ್ನು ಮಾರಾಟದ ಸರಕಾಗಿ ನೋಡಲಿಲ್ಲ.
ತಮಿಳಿನ ಮುರಸೋಳಿ, ದಿನಕರನ್ ಕುಂಕುಮಂ ಪತ್ರಿಕೆಗಳ ಸಂಪಾದಕರಾಗಿ ಸುದ್ದಿಯ ನಾಡಿಮಿಡಿತ ಬಲ್ಲವರಾಗಿದ್ದ ಸೆಲ್ವಂ ಅವರು ಉದಯ ಟಿವಿಯ ಸುದ್ದಿ ಮತ್ತು ಚರ್ಚಾ ಕಾರ್ಯಕ್ರಮಗಳಲ್ಲಿ ಎಂದಿಗೂ ಏಕೆ ಪಕ್ಷೀಯವಾಗಲು ಬಿಡಲಿಲ್ಲ. ನೊಂದವರ ಪಕ್ಷಪಾತಿಯಾಗಿ ಸುದ್ದಿ ಬರಬೇಕು ಎಂದು ಅಘೋಷಿತ ಫರ್ಮಾನು ಹೊರಡಿಸಿದ ಪರಿಣಾಮವಾಗಿ ಉದಯ ಟಿವಿಯ ಸುದ್ದಿ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಕತೆಗಾರವಾಗಿ ತಂತ್ರಜ್ಞರಾಗಿ ನಿರ್ಮಾಪಕರಾಗಿ ಪತ್ರಕರ್ತರಾಗಿಯೂ ಬಹುಮುಖ ಪ್ರತಿಭೆಯಾಗಿದ್ದ ಸೆಲ್ವಂ ಅವರು ಅಪ್ಪಟ ಕನ್ನಡಾಭಿಮಾನಿ. ಕನ್ನಡ ಚಿತ್ರರಂಗದ ವಾರ್ಷಿಕ ಪ್ರಶಸ್ತಿಗಳ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅವರು ವರನಟ ಡಾ.ರಾಜ್ ಕುಮಾರ್ ಅವರಿಗಾಗಿ ಮಾಡಿಕೊಟ್ಟ ಧನ್ಯಮಿಲನ ರೆಬಲ್ ಸ್ಟಾರ್ ಅಂಬರೀಶ್ ಅವರಿಗಾಗಿ ವಿಶೇಷವಾಗಿ ವಿನ್ಯಾಸ ಪಡಿಸಿದ ಅಂಬಿ ಸಂಭ್ರಮ ಕಾರ್ಯಕ್ರಮಗಳು ಜನ ಮಾನಸದಲ್ಲಿ ಇನ್ನು ಹಸಿರಾಗಿವೆ.
ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಯಾದ ಸೆಲ್ವಂ ಅವರು ಸರ್ವಜ್ಞನ ತ್ರಿಪದಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು ಸರ್ವಜ್ಞನ ಸಮಕಾಲಿನ ತಮಿಳುನಾಡಿನ ತಿರುವಳ್ಳುವರ್ ಅವರ ತಿರುಕ್ಕುರಳ್ ಮತ್ತು ಸರ್ವಜ್ಞನ ತ್ರಿಪದಿಗಳ ಸಾಮ್ಯತೆಯನ್ನು ಚೆನ್ನಾಗಿ ಗುರುತಿಸಿದ್ದ ಅವರು ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಬೆಂಗಳೂರಿನಲ್ಲಿ ತಿರುವಳ್ಳುವರು ಪ್ರತಿಮೆ ಅನಾವರಣದಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಮೂಲಕ ಕನ್ನಡ ತಮಿಳು ಸಾಮರಸ್ಯಕ್ಕಾಗಿ ಪ್ರಯತ್ನ ನಡೆಸಿದ್ದರು.
ಕರ್ನಾಟಕದಲ್ಲಿ ಕಂಡು ಕೇಳರಿಯದ ಬರಗಾಲ ಮತ್ತು ಪ್ರವಾಹ ಸ್ಥಿತಿ ತಲೆದೂರಿದಾಗ ತಮ್ಮ ಸಂಸ್ಥೆಯ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದರು. ಬದುಕು ಬರಹ ಎಲ್ಲದರಲ್ಲೂ ಅತ್ಯಂತ ಸರಳತೆ ಮತ್ತು ವಿನಯತೆಯನ್ನು ಮೈಗೂಡಿಸಿಕೊಂಡಿದ್ದ ಸೆಲ್ವಂ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆದರೆ ಅವರು ಬಿಟ್ಟು ಹೋಗಿರುವ ಸಾಧನೆಯ ಶಿಖರಗಳು ಚಿರಂಜೀವಿಯಾಗಿವೆ. ‘ಅಭಿಮನ್ಯು’ ಕನ್ನಡ ಮಾಸಿಕ ಪತ್ರಿಕೆಯ ಬಳಗ ಈ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸುತ್ತದೆ.