Homeಕರ್ನಾಟಕರಾಜಕೀಯ ಭಾಷಣದಿಂದ ದಸರಾ ಉದ್ಘಾಟನೆಯ ಪಾವಿತ್ರ್ಯತೆ ಹಾಳು: ಎಚ್ ವಿಶ್ವನಾಥ್

ರಾಜಕೀಯ ಭಾಷಣದಿಂದ ದಸರಾ ಉದ್ಘಾಟನೆಯ ಪಾವಿತ್ರ್ಯತೆ ಹಾಳು: ಎಚ್ ವಿಶ್ವನಾಥ್

ರಾಜಕೀಯ ಮಾತನಾಡುವ ವೇದಿಕೆ ದಸರಾ ಉದ್ಘಾಟನೆ ಆಗಿರಲಿಲ್ಲ. ಚಮಚಾಗಿರಿಯ ಭಾಷಣ ಮತ್ತು ರಾಜಕಾರಣದ ಘಮಲಿನಿಂದಾಗಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ದಸರಾ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಕೂಡ ರಾಜಕೀಯ ಭಾಷಣ ಮಾಡಿದ್ದಾರೆ. ದಸರಾ ಇತಿಹಾಸ, ಮಹಾರಾಜರ ಕೊಡುಗೆ, ನಾಡಹಬ್ಬದ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡದೇ, ಕೆಳಮಟ್ಟದ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಿದ್ದಾರೆ” ಎಂದು ಜಿ ಟಿ ದೇವೇಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

“ಜೆಡಿಎಸ್‌ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ ಟಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಬೂಟಾಟಿಕೆ ತರ ಕಾಣುತ್ತಿದೆ. ಅವರೂ ಮುಡಾ ಫಲಾನುಭವಿಯೇ. ಅಷ್ಟೆಲ್ಲ ಹೊಗಳುವ ಅಗತ್ಯ ಇರಲಿಲ್ಲ” ಎಂದರು.

“ಮುಡಾ ಹಗರಣದ ಬಗ್ಗೆ ಇಷ್ಟು ದಿನ ಮಾತನಾಡದ ಜಿಟಿಡಿ ಈಗ ಏಕೆ ಬಾಯಿ ಬಿಟ್ಟಿದ್ದಾರೆ? ಅವರೂ ಮುಡಾ ಫಲಾನುಭವಿ ಆಗಿರುವುದೇ ಇದಕ್ಕೆ ಕಾರಣ. ಅವರದ್ದೂ ಎಷ್ಟೋ‌ ನಿವೇಶನ ಇವೆ ಎಂಬ ಮಾತುಗಳಿವೆ. ಎಲ್ಲ ರಾಜಕಾರಣಿಗಳೂ ಸೇರಿ ಮೈಸೂರನ್ನು ಕಳ್ಳರ ಸಂತೆಯಂತೆ ಬಿಂಬಿಸಿದ್ದಾರೆ” ಎಂದು ದೂರಿದರು.

“ಜೆಡಿಎಸ್‌ ಶಾಸಕಾಂಗ ‌ಪಕ್ಷದ ನಾಯಕನನ್ನಾಗಿ ಜಿಟಿಡಿ ಅವರನ್ನು ಮಾಡದಿರುವುದು ಅವರ ಕೋಪಕ್ಕೆ ಮತ್ತೊಂದು ಕಾರಣ. ರಾಜ್ಯ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಯಾರೂ ಹೇಳಿಲ್ಲ. ಆದರೂ ಮುಖ್ಯಮಂತ್ರಿಯೇ ಆ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

“ಹಿಂದೆ ಚಾಮುಂಡೇಶ್ವರಿಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಪದೇ ಪದೇ ಆ ತಾಯಿಯ ಆಶೀರ್ವಾದ ಬೇಡಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ. ಇದರ ಅರ್ಥವೇನು”ಎಂದು ಪ್ರಶ್ನಿಸಿದರು.

“ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಮಧ್ಯಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಪತ್ನಿ ಪಾರ್ವತಿಯವರು 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಅಪರಾಧ ಒಪ್ಪಿಕೊಂಡಾಕ್ಷಣ, ಮಾಡಿರುವ ಅಪರಾಧ ಹೋಗಿಬಿಡುವುದಿಲ್ಲ” ಎಂದರು.

“ಮುಡಾದಿಂದ ಶೇ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ಬಗ್ಗೆಯೂ ತನಿಖೆ ಆಗಬೇಕು. 14 ನಿವೇಶನಗಳ ಹಂಚಿಕೆ ಪ್ರಕರಣ, ನ್ಯಾಯಾಲಯದ ಆದೇಶದಂತೆ ತನಿಖೆಯ ಹಂತದಲ್ಲಿರುವಾಗಲೇ ನಿವೇಶನಗಳನ್ನು ವಾಪಸ್ ಪಡೆದುಕೊಳ್ಳಲು ಮುಡಾ ಆಯುಕ್ತರಿಗೆ ಅಧಿಕಾರ ಏನಿದೆ” ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments