ಕೋಲಾರ ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡು ಜನ ಪ್ರತಿನಿಧಿಗಳ ಕಣ್ಣೆದುರೇ ಕಾರ್ಯಕರ್ತರ ಗಲಾಟೆ ಮಾಡಿ, ಕೈ ಕೈ ಮಿಲಾಸುವ ಹಂತಕ್ಕೆ ತಲುಪಿದ ಘಟನೆ ನಡೆಯಿತು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಕೋಲಾರ ಜಿಲ್ಲೆ ಉಸ್ತುವಾರಿ ನಾರಾಯಣಸ್ವಾಮಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಮಾಲೂರು ಶಾಸಕ ನಂಜೇಗೌಡ, ಎಂಎಲ್ ಸಿ, ಮಾಜಿ ಸಭಾಪತಿ ಸುದರ್ಶನ್ ವೇದಿಕೆ ಮೇಲೆ ಕುಳಿತ್ತಿದ್ದರು.
ಸಭೆಯ ಪ್ರಾರಂಭದಲ್ಲೇ ವೇದಿಕೆಯ ಮುಂಭಾಗದಲ್ಲಿದ್ದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಹಾಗೂ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ರವರೊಡನೆ ‘ನೀವು ಜಿಲ್ಲೆಯಲ್ಲಿ ನಡೆಯುವ ಯಾವುದೇ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಹಿರಿಯರನ್ನು ಕರೆಯದೇ ಕಡೆಗಣಿಸುತ್ತಿದ್ದೀರಿ. ನೀವು ಸಭೆಯಿಂದ ಹೊರ ನಡೆಯಿರಿ’ ಎಂದು ಗಲಾಟೆ ಮಾಡುತ್ತಾ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಅವರನ್ನ ಹೊರತಳ್ಳಲು ಪ್ರಯತ್ನಿಸಿದರು.
ತೀರ್ಮಾನ ನಾಯಕರದ್ದು: ಲಕ್ಷ್ಮೀ ನಾರಾಯಣ್
ಸುದ್ದಿಗಾರರಿಗೆ ಅಲ್ಲಿಯೇ ಸ್ಪಷ್ಟನೆ ನೀಡಿದ ಲಕ್ಷ್ಮೀ ನಾರಾಯಣ್, “ನನ್ನ ಮೇಲೆ ಹಲ್ಲೆ ಏನೂ ನಡೆದಿಲ್ಲ. ಇಲ್ಲಿಯ ಘಟನೆಯನ್ನ ಖುದ್ದು ನಾಯಕರುಗಳು ವೀಕ್ಷಿಸಿದ್ದಾರೆ. ಮುಂದಿನ ತೀರ್ಮಾನ ಅವರೇ ಮಾಡುತ್ತಾರೆ” ಎಂದರು.
ಸಭೆ ನಂತರ ಗಲಾಟೆ ಹಾಗೂ ಗೊಂದಲಗಳ ಬಗ್ಗೆ ಮಾಹಿತಿ ಹಂಚಿಕೊಂಡ ಉಸ್ತುವಾರಿ ನಾರಾಯಣಸ್ವಾಮಿ, “ನಾನು ಮೊದಲನೇ ಬಾರಿ ಸಭೆಗೆ ಬಂದಿದ್ದೆ. ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಯಬಾರದು. ನಮ್ಮದೊಂದು ಕುಟುಂಬ ಹಾಗಾಗಿ ನಾನು ಇಲ್ಲೇ ಈಗಲೇ ನಾಯಕರ ಅಭಿಪ್ರಾಯ ಪಡೆದು ಭಿನ್ನಮತ ಸ್ಫೋಟಕ್ಕೆ ಅಂತ್ಯ ಹಾಡುವೆ” ಎಂದು ತಿಳಿಸಿದರು.
ಕಾರ್ಯಕರ್ತರ ಸಭೆಯಲ್ಲಾದ ಗಲಾಟೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಬಣ ಹಾಗೂ ಕೆ ಎಚ್ ಮುನಿಯಪ್ಪನವರ ನಡುವಿನ ಭಿನ್ನಮತದ ಸ್ಫೋಟವೆಂದು ಬಣ್ಣಿಸಲಾಗುತ್ತಿದೆ. ಇಂದಿನ ಸಭೆಗೆ ಶ್ರೀನಿವಾಸಪುರ ಕ್ಷೇತ್ರದ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಯಾರೂ ಭಾಗವಹಿಸುತ್ತಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.