ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಶುಕ್ರವಾರ ಹೆಚ್ ಡಿ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಗೆ ಹಾಜರಾದರು.
ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೆಚ್ ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಆದರೆ ಸೋಮವಾರ ಬೇರೆ ಕೆಲಸವಿರುವುದರಿಂದ ಇಂದೇ ವಿಚಾರಣೆಗೆ ಬರುವುದಾಗಿ ತಿಳಿಸಿದ್ದರು.
ಹೀಗಾಗಿ ದೆಹಲಿಯಿಂದ ಬಂದು, ಬೆಂಗಳೂರು ಏರ್ಪೋರ್ಟ್ನಿಂದ ನೇರವಾಗಿ ಲೋಕಾಯುಕ್ತಕ್ಕೆ ತೆರಳಿದರು. ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸತತ 3 ಘಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಈ ಬಗ್ಗೆ ದೆಹಲಿ ಮಾತನಾಡಿದ್ದ ಹೆಚ್ ಡಿ ಕುಮಾರಸ್ವಾಮಿ, “ಲೋಕಾಯುಕ್ತದ ಯಾವ ಪೊಲೀಸ್ ಅಧಿಕಾರಿಯೂ ನನ್ನನ್ನು ಭೇಟಿ ಮಾಡಿಲ್ಲ. ಅವರು ನನಗೆ ನೋಟಿಸ್ ನೀಡಿದ್ದಾರೆ ಎಂಬುವುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ” ಎಂದು ಹೇಳಿದ್ದರು.
“ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಏಜೆನ್ಸಿಗಳು ಸ್ವಾಧೀನಪಡಿಸಿಕೊಂಡಿರುವ ಹಲವಾರು ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.