ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿರುವ ಆರೋಪ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೇಳಿಬಂದಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ ಕೆ ಸುರೇಶ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಎರಡು ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸವನ್ನು ಮುನಿರತ್ನ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಮುನಿರತ್ನ ಕೀಳುಪದಗಳನ್ನು ಬಳಸಿದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಹಿಂದೆಯೂ ಅವರು ಒಕ್ಕಲಿಗ ಸಮುದಾಯವನ್ನು ಬಹಳ ಕೀಳಾಗಿ ನೋಡಿದ್ದ” ಎಂದು ಆರೋಪಿಸಿದರು.
“ಬಿಜೆಪಿ ನಾಯಕರು ಮುನಿರತ್ನ ಪ್ರಕರಣವನ್ನು ಯಾವ ರೀತಿ ಅರಗಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಮುನಿರತ್ನ ವಿರುದ್ಧದ ಆರೋಪಗಳಿಗೆ ಬಿಜೆಪಿಯ ಒಬ್ಬರೇ ಒಬ್ಬರೂ ಈವರೆಗೂ ಹೇಳಿಕೆ ನೀಡಿಲ್ಲ. ನೈತಿಕತೆ ಇದ್ದರೆ ಇಷ್ಟೊತ್ತಿಗೆ ಪಕ್ಷದಿಂದ ಮುನಿರತ್ನ ಅವರನ್ನು ವಜಾ ಮಾಡಬೇಕಿತ್ತು” ಎಂದು ಹೇಳಿದರು.
ಸಾರ್ವಜನಿಕ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಾಜಿ ಸಚಿವ, ಆರ್. ಆರ್. ನಗರ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಬಹಳ ಕೀಳು ದರ್ಜೆಯ ಪದಗಳನ್ನು ಆಡಿದ್ದಾರೆ. ಕೀಳರಿಮೆ ಮನಸ್ಥಿತಿ ಇರುವವರೂ ಯಾರೂ ಕೂಡ ಇಂಥ ಪದ ಬಳಸಲ್ಲ. ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಮಾಜಿ ಮಂತ್ರಿ. ಆರ್ಎಸ್ಎಸ್ ಜೊತೆಗೆ ಒಡನಾಟ ಇಟ್ಟುಕೊಂಡವರು ಇವರು” ಎಂದು ಲೇವಡಿ ಮಾಡಿದರು.
“ಬಿಜೆಪಿ ನಾಯಕರು ಈ ರೀತಿ ಮಾಡುವುದು ಎಷ್ಟು ಸರಿ? ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ. ಇನ್ನೊಂದು ಕಡೆ ಲಂಚದ ಆರೋಪ. ನೇರವಾಗಿ ದುಡ್ಡು ತಂದುಕೊಟ್ಟರೆ ಬದುಕುತ್ತೀಯಾ ಎಂದು ಮುನಿರತ್ನ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಥರ ಮಾಡಿದ್ದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಬಿಜೆಪಿ ನಾಯಕ, ಸಿನಿಮಾ ನಿರ್ಮಾಪಕ” ಎಂದು ಹೇಳಿದರು.