ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ದಾಖಲಿಸಿರುವ ಸ್ವ-ಇಚ್ಛಾ ಹೇಳಿಕೆಯಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆಯಿಂದ ಕನ್ನಡದ ಇನ್ನಿಬ್ಬರು ನಟಿಯರಿಗೆ ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳಿಸಿರುವುದು ಪತ್ತೆಯಾಗಿದೆ.
ರೇಣುಲಸ್ವಾಮಿಯನ್ನು ಶೆಡ್ಗೆ ಕರೆತಂದು ಹಲ್ಲೆ ಮಾಡುವ ಸಂದರ್ಭದಲ್ಲಿ 14ನೇ ಆರೋಪಿ ಪ್ರದೋಶ್ ರೇಣುಕಸ್ವಾಮಿಯ ಮೊಬೈಲ್ ಕಸಿದು ಅದರಲ್ಲಿ ಆತ ಮಾಡಿರುವ ಸಂದೇಶಗಳನ್ನು ಪರಿಶೀಲನೆ ಮಾಡಿದಾಗ ಗೌತಮ್ ಕೆಎಸ್ ಹೆಸರಿನ ನಕಲಿ ಖಾತೆಯಿಂದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಅವರಿಗೂ ಸಹ ಅಶ್ಲೀಲ ಸಂದೇಶ ಕಳಿಸಿರುವುದು ಬಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರಾಗಿಣಿ ದ್ವಿವೇದಿ, “ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಏಜೆನ್ಸಿಯವರು ಹ್ಯಾಂಡಲ್ ಮಾಡುತ್ತಾರೆ. ಹಾಗಾಗಿ ನನಗೆ ಯಾರು ಸಂದೇಶ ಕಳಿಸಿದ್ದಾರೆ, ಇಲ್ಲ ಎಂಬ ವಿಷಯ ನನಗೆ ತಿಳಿದು ಬಂದಿಲ್ಲ” ಎಂದಿದ್ದಾರೆ.
ಇನ್ನು ನಟಿ ಶುಭಾ ಪೂಂಜಾ ಸಹ ಪ್ರತಿಕ್ರಿಯೆ ನೀಡಿದ್ದು, “ನನಗೆ ಗೌತಮ್ ಅನ್ನುವ ಹೆಸರಿನಲ್ಲಿ ಯಾವುದೇ ರೀತಿಯ ಮೇಸೆಜ್ ಬಂದಿಲ್ಲ, ಸುಖಾ ಸುಮ್ಮನೆ ನನ್ನ ಹೆಸರು ಯಾಕೆ ಪ್ರದೋಷ್ ಹೇಳಿದ್ದಾರೆ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಅಸಲಿಗೆ ರೇಣುಕಸ್ವಾಮಿ ಕೊಲೆ ನಡೆದು ಪ್ರಕರಣ ಹೊರಬಿದ್ದಾದ ಬಳಿಕ ಕೆಲವು ನಟಿಯರು ತಮಗೆ ‘ಗೌತಮ್’ ಹೆಸರಿನ ಖಾತೆಯಿಂದ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಬಂದಿದ್ದಾಗಿ ಹೇಳಿಕೊಂಡಿದ್ದರು.
ತಾವು ಆ ಖಾತೆಯನ್ನು ಬ್ಲಾಕ್ ಮಾಡಿದ್ದಾಗಿಯೂ ಹೇಳಿಕೊಂಡಿದ್ದರು. ರೇಣುಕಸ್ವಾಮಿ ತನ್ನ ನಕಲಿ ಖಾತೆಯಿಂದ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ, ಅದೇ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ.