Homeಕರ್ನಾಟಕರಾಮೇಶ್ವರಂ ಕೆಫೆ ಸ್ಫೋಟ | ಆರೋಪಿಗಳ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಕೆ

ರಾಮೇಶ್ವರಂ ಕೆಫೆ ಸ್ಫೋಟ | ಆರೋಪಿಗಳ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರಿನ ವೈಟ್‌ ಫೀಲ್ಡ್‌ನ ‘ದಿ ರಾಮೇಶ್ವರಂ ಕೆಫೆ’ ಸ್ಫೋಟ ಪ್ರಕರಣಕ್ಕೆ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸೋಮವಾರ ನಗರದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.

ಸ್ಫೋಟದ ಆರೋಪಿಗಳಾದ ಮಸಾವಿರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ಅಹಮದ್ ತಾಹಾ, ಮಾಜ್ ಮುನೀರ್ ಅಹಮದ್ ಹಾಗೂ ಮುಜಾಮಿಲ್ ಷರೀಫ್ ವಿರುದ್ಧ ಎನ್ ಐ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿ ಆರೋಪಿಗಳ ಪಾತ್ರವನ್ನು ಉಲ್ಲೇಖಿಸಿದ್ದಾರೆ.

ಕಳೆದ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಂದೇ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸ್ಫೋಟಿಸಲು ಯತ್ನಿಸಿ ವಿಫಲವಾಗಿದ್ದರು. ಬಳಿಕ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ್ದರು ಎಂಬ ಅಂಶ ಚಾರ್ಜ್ ಶೀಟ್‌ನಲ್ಲಿ ಬಹಿರಂಗವಾಗಿದೆ.

ಯುವಕರೇ ಐಸಿಸ್​​ನ ಟಾರ್ಗೆಟ್

ಶಿವಮೊಗ್ಗ ಮೂಲದವರಾಗಿದ್ದ ಮಸಾವಿರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ಅಹಮದ್ ತಾಹಾ ಐಸಿಸ್‌ನಿಂದ ಪ್ರೇರಿತರಾಗಿದ್ದು, ಮುಸ್ಲಿಂ ಯುವಕರನ್ನು ಐಸಿಸ್‌ನತ್ತ ಸೆಳೆಯುತ್ತಿದ್ದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಹಾಗೂ ಮುಜಾಮಿಲ್ ಷರೀಫ್​ನನ್ನು ಸಹ ಅದೇ ರೀತಿ ಐಸಿಸ್‌ನ ವಿಚಾರಗಳೆಡೆಗೆ ಸೆಳೆಯಲಾಗಿತ್ತು ಎಂದು ವಿವರಿಸಲಾಗಿದೆ.

ಆರೋಪಿಗಳು ಭಾರತದ ಸಿಮ್ ಕಾರ್ಡ್‌ಗಳು, ಭಾರತೀಯ ಬ್ಯಾಂಕ್ ಖಾತೆ ಹಾಗೂ ಡಾರ್ಕ್ ವೆಬ್ ಬಳಸಿ ಸೃಷ್ಟಿಸಿದ ಭಾರತ ಹಾಗೂ ಬಾಂಗ್ಲಾದೇಶದ ಐಡೆಂಟಿಟಿ ದಾಖಲೆಗಳನ್ನು ಹೊಂದಿದ್ದರು. ಹಾಗೂ ಎಲ್‌ಇಟಿ ಬೆಂಗಳೂರು ಪಿತೂರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶಹೀದ್ ಫೈಸಲ್‌ಗೆ ಶೋಯೆಬ್ ಅಹ್ಮದ್ ಮಿರ್ಜಾ ಎಂಬಾತನನ್ನು ತಾಹಾನೇ ಪರಿಚಯಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಅಲ್ಲದೆ, ನಂತರ ತನ್ನ ಹ್ಯಾಂಡ್ಲರ್ ಆಗಿರುವ ಫೈಸಲ್‌ನನ್ನು ಅಲ್-ಹಿಂದ್ ಐಸಿಸ್ ಮಾಡ್ಯೂಲ್ ಪ್ರಕರಣದ ಆರೋಪಿ ಮೆಹಬೂಬ್ ಪಾಷಾಗೆ, ದಕ್ಷಿಣ ಭಾರತದಲ್ಲಿ ಐಸಿಸ್ ನೆಲೆ ಭದ್ರಪಡಿಸುವುದರ ಮುಂದಾಳತ್ವ ಹೊಂದಿದ್ದ ಖಾಜಾ ಮೊಹಿದೀನ್‌ಗೆ ಮತ್ತು ಮಾಜ್ ಮುನೀರ್ ಅಹ್ಮದ್‌ಗೆ ಪರಿಚಯಿಸಿದ್ದ ಎಂಬುದನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಐಇಡಿ ಬಳಸಿ ಸ್ಫೋಟಿಸಲಾಗಿತ್ತು. ಸ್ಫೋಟದ ತೀವ್ರತೆಗೆ ಗ್ರಾಹಕರು, ಕೆಫೆ ಸಿಬ್ಬಂದಿ ಹೋಟೆಲ್ ಸಿಬ್ಬಂದಿ ಫಾರುಖ್, ಅಮೇಜನ್ ಕಂಪನಿಯ ಸಿಬ್ಬಂದಿ ದೀಪಾಂಶು, ಸ್ವರ್ಣಾಂಬ, ಮೋಹನ್, ನಾಗಶ್ರೀ, ಮೋಮಿ, ಬಲರಾಮ್ ಕೃಷ್ಣನ್, ನವ್ಯಾ, ಶ್ರೀನಿವಾಸ್ ಗಾಯಗೊಂಡಿದ್ದರು.

ಅವರಲ್ಲಿ ಸ್ವರ್ಣಾಂಬಗೆ 40 ಪರ್ಸೆಂಟ್ ಸುಟ್ಟಗಾಯಗಳಾಗಿದ್ದವು. ಸ್ಫೋಟದ ತೀವ್ರತೆಗೆ ಮಹಿಳೆ ವಿಲವಿಲ ಒದ್ದಾಡಿದ್ದರು. ಜೊತೆಗೆ 8ರಿಂದ 9 ಮಂದಿಗೆ ಗಂಭೀರಗಾಯವಾಗಿತ್ತು. ಮೊದಲಿಗೆ ಸಿಸಿಬಿ ಕೈಗೊಂಡ ಬಳಿಕ ಪ್ರಕರಣದ ತನಿಖೆ ಆರಂಭಿಸಿದ್ದ ಎನ್ಐಎ, ಆರೋಪಿ ಮಸಾವಿರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ಅಹಮದ್ ತಾಹಾನ ಪಾತ್ರದ ಕುರಿತು ಮಾಹಿತಿ ಕಲೆ ಹಾಕಿತ್ತು. ಸ್ಫೋಟದ ಬಳಿಕ ನಾಪತ್ತೆಯಾಗಿದ್ದ ಆರೋಪಿಗಳನ್ನು ಬರೋಬ್ಬರಿ 42 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments