ಮಾನ್ಯ ಸಂಸದರೇ ದರ್ಶನ್, ಮುಡಾ ವಿಚಾರ ಎಲ್ಲ ಬಿಟ್ಟುಬಿಡಿ. ಮಹದಾಯಿಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಹಣ ಕೊಡಿಸಿ ಎಂದು ಗಣೇಶ ಹಬ್ಬದ ದಿನ ಕೈ ಮುಗಿದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವ ನಗರದ ನಿವಾಸದ ಬಳಿ ಮಾತನಾಡಿದ ಅವರು, “ಈ ಎರಡು ಯೋಜನೆಗಳಿಗೆ ಇರುವ ವಿಘ್ನ ನಿವಾರಣೆ ಮಾಡಿಸಿ ಎಂದು ಇಲ್ಲಿಂದಲೇ ಪ್ರಹ್ಲಾದ ಜೋಶಿಯವರಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ” ಎಂದರು.
‘ಮುಡಾ, ವಾಲ್ಮೀಕಿ ಪ್ರಕರಣದ ಹಾದಿ ತಪ್ಪಿಸಲು ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲಿನ ಒಳಗಡೆ ಇರುವ ಫೋಟೋವನ್ನು ಸರ್ಕಾರವೇ ಬಿಡುಗಡೆ ಮಾಡಿದೆ’ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.
“ಮಹದಾಯಿ ವಿಚಾರವಾಗಿ ಸರ್ವ ಪಕ್ಷ ಸಭೆ ಅಥವಾ ನಿಯೋಗದ ಸಭೆ ನಡೆಸುವುದೋ ಎನ್ನುವ ಬಗ್ಗೆ 15 ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗುವುದು. ಹಾಗೂ ನಮ್ಮ ಹೋರಾಟದ ಸ್ವರೂಪದ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ಹೇಳಿದರು.
ಪ್ರೀತಿಯಿಂದ ಸುಧಾಕರ್ ಸವಾಲನ್ನು ಸ್ವೀಕರಿಸುತ್ತೇನೆ
ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆ ಶಿವಕುಮಾರ್ ಅವರನ್ನು ಭಗೀರಥ ಎಂದು ಕರೆಯುತ್ತೇನೆ ಎನ್ನುವ ಸಂಸದ ಸುಧಾಕರ್ ಅವರ ಹೇಳಿಕೆಯ ಬಗ್ಗೆ ಮಾತನಾಡಿ, “ಸಂಸದ ಡಾ. ಕೆ.ಸುಧಾಕರ್ ಅವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಾನು ಪ್ರೀತಿ, ಗೌರವಗಳಿಂದ ಸ್ವೀಕರಿಸುತ್ತೇನೆ. ಇದು ನನ್ನ ಜವಾಬ್ದಾರಿ” ಎಂದರು.
“ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ತರಬೇಕು ಎಂದು ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಸುಬ್ಬಾರೆಡ್ಡಿ, ಶಿವಶಂಕರ್ ರೆಡ್ಡಿ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಹಾಗೂ ಸುಧಾಕರ್ ಸೇರಿದಂತೆ ಅನೇಕರು ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದ್ದಾರೆ. ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ” ಎಂದು ಹೇಳಿದರು.
ಇನ್ನು ಒಂದು ತಿಂಗಳಲ್ಲಿ ಕೋವಿಡ್ ವರದಿಯನ್ನು ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವ ಕಾರಣಕ್ಕೆ ಸುಧಾಕರ್ ಅವರು ನಿಮ್ಮನ್ನು ಪದೇಪದೇ ಹೊಗಳುತ್ತಿದ್ದಾರೆಯೇ ಎಂದು ಕೇಳಿದಾಗ, “ನನಗೆ ಕೋವಿಡ್ ವರದಿಯ ಬಗ್ಗೆ ಏನು ಗೊತ್ತಿಲ್ಲ. ಮೊನ್ನೆ ನಡೆದ ಸಚಿವ ಸಂಪುಟ ಸಭೆಗೆ ನಾನು ಭಾಗವಹಿಸಿರಲಿಲ್ಲ. ಸಕಲೇಶಪುರದ ಎತ್ತಿನಹೊಳೆಯಲ್ಲಿದ್ದೆ” ಎಂದರು.
ಬಯಲು ಸೀಮೆಯಲ್ಲಿ ಇನ್ನು ಕೆರೆಗಳು ತುಂಬಿಲ್ಲ
“ಗೌರಿ ಹಬ್ಬದ ದಿನ ಗಂಗೆಯನ್ನು ಪೂಜೆ ಮಾಡಿ ಸಂಭ್ರಮ ಪಟ್ಟಿದ್ದೇವೆ. ಇದನ್ನು ಒಂದು ಒಂದಷ್ಟು ಜನ ನೋಡಿ ಸಂಭ್ರಮಪಟ್ಟಿದ್ದಾರೆ ಟೀಕೆ ಮಾಡಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಬರಗಾಲದ ಛಾಯೆ ದೂರವಾಗಿ, ಉತ್ತಮ ಮಳೆಬಿದ್ದು ಜಲಾಶಯಗಳು ತುಂಬಿವೆ. ಬಯಲು ಸೀಮೆಯಲ್ಲಿ ಒಂದಿಷ್ಟು ಕಡೆ ಮಳೆ ಕಡಿಮೆಯಾಗಿದೆ. ಮಂಡ್ಯ ಬೆಂಗಳೂರು ಗ್ರಾಮಾಂತರ ತುಮಕೂರು ಈ ಭಾಗದಲ್ಲಿ ಇನ್ನೂ ಕೆರೆಗಳು ತುಂಬಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಎತ್ತಿನಹೊಳೆ ಯೋಜನೆ ಪ್ರಗತಿ ಕಂಡಿರಲಿಲ್ಲ. ಇದಕ್ಕೆ ನಾನಾ ಕಾರಣಗಳು ಇರಬಹುದು” ಎಂದು ಹೇಳಿದರು.