ಪಿಎಸ್ಐ ನೇಮಕಾತಿ ಪರೀಕ್ಷೆ ನಿಗಧಿಯಾಗಿದ್ದ ದಿನವೇ (ಸೆ.22) ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯುಪಿಎಸ್‌ಸಿಗಿಂತ ಮೊದಲೇ ನಾವು ಪಿಎಸ್‌ಐ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದೇವೆ. ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದು. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು” ಎಂದು ತಿಳಿಸಿದರು.
“ಈಗಾಗಲೇ ಪಿಎಸ್ಐ ನೇಮಕಾತಿ ಬಹಳ ವಿಳಂಬವಾಗಿದೆ. ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಗಳಿಲ್ಲದೇ ಸಾವಿರಾರು ಹುದ್ದೆಗಳ ನೇಮಕಾತಿ ಸುಲಭವಾಗಿ ನಡೆದಿದೆ. ಪಿಎಸ್ಐ ಹಗರಣದ ಬಳಿಕ ವಿಳಂಬವಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಸಹ ಕೋರ್ಟ್‌ಗೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶ ಪ್ರಕಟಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ” ಎಂದು ಹೇಳಿದರು.
“ಹೆಚ್.ಡಿ.ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಅಕ್ರಮದ ಕುರಿತು ಪ್ರಾಸಿಕ್ಯೂಷನ್‌ಗೆ ವರ್ಷಾನುಗಟ್ಟಲೇ ಅವಕಾಶ ಕೊಟ್ಟಿಲ್ಲ ಎಂಬುದನ್ನು ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ರಾಜ್ಯಪಾಲರು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ. ಈ ವಿಚಾರವನ್ನು ರಾಷ್ಟ್ರಪತಿ ಭೇಟಿಗೆ ಹೋದಾಗ ಪ್ರಸ್ತಾಪಿಸುತ್ತೇವೆ” ಎಂದರು.