ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗಾಗಗಲೇ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದು, ಈ ಬೆನ್ನಲ್ಲೇ ಇದೀಗ ಮತ್ತೊಂದು ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ನಲ್ಲಿ ಬಾಕಿ ಉಳಿದಿರುವ 1,494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಅರುಣ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
1,494 ಕೋಟಿ ರೂ. ಹಣ ಎಲ್ಲಿದೆ? ರಾಜ್ಯ ಸರ್ಕಾರದ ಖಜಾನೆಯಲ್ಲೂ ಇಲ್ಲ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕೋರಿ ದೂರಿನಲ್ಲಿ ಅರುಣ್ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಂದ ಸಂವಿಧಾನದ ಬಾಧ್ಯತೆಯ ಉಲ್ಲಂಘನೆ ಮತ್ತು ಅಸಾಂವಿಧಾನಿಕ ಹಣಕಾಸು ವ್ಯವಹಾರಕ್ಕಾಗಿ ಅವರನ್ನು ವಜಾಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಎಲ್ ಸಿ ಅರುಣ್, “ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. 2022-23ರ ಅವಧಿಯಲ್ಲಿ ನಮ್ಮ ಸರ್ಕಾರದ ಅಧಿಕಾರದಲ್ಲಿ ಇತ್ತು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ಗಳಲ್ಲಿ ಎಷ್ಟು ಹಣ ಬಳಕೆ ಆಗಿದೆ. ಉಳಿದ ಮೊತ್ತ ಯಾವುದಕ್ಕೆ ಉಪಯೋಗ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದೇನೆ. 1953 ಕೋಟಿ ರೂ. ಹಣ ಇತ್ತು, ಸಂಚಿತ ನಿಧಿಗೆ ಉಳಿದ ಹಣ ಹೋಗಬೇಕು. ಹಣ ಬಳಕೆ ಮಾಡಬೇಕೆಂದರೆ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು” ಎಂದು ತಿಳಿಸಿದರು.