ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜೀನಾಮೆಗೆ ಬಿಜೆಪಿ ಶಾಸಕರಿಂದಲೇ ಒತ್ತಾಯ ವ್ಯಕ್ತವಾಗಿರುವ ವಿಚಾರ ಈಗಾಗಲೇ ಪಕ್ಷದೊಳಗೆ ಬಹಳ ಚರ್ಚೆ ಆಗಿದೆ. ಶಾಸಕರ ಹೇಳಿಕೆಯನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರು ನಿಲುವು ಪ್ರಕಟಿಸುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.
ಬಿಜೆಪಿಯ ಭಿನ್ನಮತಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, “ನಾನೂ ಸಹ ಸಮಯ ನೋಡಿ ದೆಹಲಿ ನಾಯಕರ ಭೇಟಿಯಾಗುತ್ತೇನೆ. ಈ ಎಲ್ಲ ಬೆಳವಣಿಗೆಯನ್ನು ಕೇಂದ್ರದ ನಾಯಕರ ಗಮನಕ್ಕೆ ತರುತ್ತೇನೆ” ಎಂದರು.
“ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಜಕೀಯ ಪಕ್ಷವಲ್ಲ. ಆದ್ದರಿಂದ ರಾಜಕೀಯದ ಸಭೆ ಮಾಡುವ ಪದ್ಧತಿ ಸಂಘದಲ್ಲಿಲ್ಲ. 40 ವರ್ಷದ ಹಿಂದೆಯೇ ನಾನು ಆರ್ಎಸ್ಎಸ್ ಚಡ್ಡಿ ಹಾಕಿದವನು. ಆರ್ಎಸ್ಎಸ್ನ ನೀತಿ, ನಿಯಮ ಎಲ್ಲವೂ ನನಗೂ ಗೊತ್ತಿದೆ. ಆರ್ಎಸ್ಎಸ್ ರಾಜಕಾರಣದಲ್ಲಿ ಭಾಗವಹಿಸುವುದು ಗೊತ್ತಿಲ್ಲ” ಎಂದು ಹೇಳಿದರು.
“ಬಳ್ಳಾರಿ ಪಾದಯಾತ್ರೆಗೆ ಕೇಂದ್ರದ ನಾಯಕರು ಒಪ್ಪಿಗೆ ನೀಡಿದರೆ ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಸಣ್ಣ ಪುಟ್ಟ ವ್ಯತ್ಯಾಸ ಇರುವುದು ನನ್ನ ಗಮನಕ್ಕೂ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರನ್ನು ಕೇಂದ್ರದ ನಾಯಕರು ಕರೆಸಿ ಈ ಹಿಂದೆಯೂ ಚರ್ಚೆ ಮಾಡಿದ್ದಾರೆ. ಈ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಜನರು ಕೂಡ ನಮ್ಮಿಂದ ಅದನ್ನೇ ನಿರೀಕ್ಷೆ ಮಾಡುತ್ತಾರೆ” ಎಂದು ತಿಳಿಸಿದರು.
“ಸಿ ಪಿ ಯೋಗೇಶ್ವರ್ ಅವರ ಮನೆಗೆ ಹೋಗಿ ಚರ್ಚೆ ಮಾಡಲಾಗಿದೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಎನ್ಡಿಎ ನಿರ್ಧಾರ ಮಾಡಬೇಕಿದ್ದು, ಆ ಬಗ್ಗೆಯೂ ಮನವರಿಕೆ ಮಾಡಿಕೊಡುತ್ತೇವೆ. ಬಂಡಾಯ ಸ್ಪರ್ಧೆ ಮಾಡುವುದು ಸರಿಯಲ್ಲ. ಏಕ ಅಭ್ಯರ್ಥಿ ಸ್ಪರ್ಧಿಸುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ” ಎಂದರು.
“ಜನ ಔಷಧಿ ಯೋಜನೆ ಕೇಂದ್ರ ಸರ್ಕಾರದ್ದು. ಇದರಿಂದ ಅತಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತವೆ. ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರಿಗೆ ಲಾಬಿಗಳು ತಲೆ ಸವರಿದೆ. ಆದ್ದರಿಂದ ಇಂತಹ ಕೆಲಸ ಮಾಡಲು ಹೊರಟಿದ್ದಾರೆ. ಇವರಿಗೆ ಕಮಿಶನ್ ಸಿಗಲಿದೆ ಎಂಬ ಕಾರಣಕ್ಕೆ ಜನರಿಗೆ ದ್ರೋಹ ಬಗೆಯಲು ಮುಂದಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.