Homeಕರ್ನಾಟಕಭೋವಿ ನಿಗಮ ಅಕ್ರಮ | ತನಿಖೆ ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು, ಮಧ್ಯರಾತ್ರಿ ದಾಳಿ

ಭೋವಿ ನಿಗಮ ಅಕ್ರಮ | ತನಿಖೆ ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು, ಮಧ್ಯರಾತ್ರಿ ದಾಳಿ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಮಂಗಳವಾರ ಮಧ್ಯರಾತ್ರಿ ನಿಗಮದ ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ವಿಶ್ವೇಶ್ವರಯ್ಯ ಟವರ್ ಬಳಿಯಿರುವ ನಿಗಮದ ಕಚೇರಿ ಮೇಲೆ ದಾಳಿ ಮಾಡಿರುವ ಸಿಐಡಿ ಅಧಿಕಾರಿಗಳ ತಂಡವು ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ ಕಂಪ್ಯೂಟರ್, ಕೆಲವು ಕಡತಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದೆ. ಅಲ್ಲದೇ,ಅಧಿಕಾರಿಗಳು ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿ, ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಭೋವಿ ಅಭಿವೃದ್ದಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು.

ಅಕ್ರಮ ಸಂಬಂಧ ಬೆಂಗಳೂರು, ಕಲಬುರಗಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಕೋಟ್ಯಂತರ ರೂ. ಅಕ್ರಮವಾಗಿದ್ದರಿಂದ ಕೆಲ ದಿನಗಳ ಹಿಂದಷ್ಟೇ ಸರ್ಕಾರ, ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ಪ್ರಾಥಮಿಕ ತನಿಖೆಯಲ್ಲಿ 60 ಕೋಟಿಗೂ ಹೆಚ್ಚು ಅಕ್ರಮ ನಡೆದಿರುವ ಮಾಹಿತಿ ದೊರೆತಿದ್ದು ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ನಿಗಮದ ಕಚೇರಿಯಲ್ಲಿ 2021ರ ಏಪ್ರಿಲ್ 5ರಿಂದ 2022ರ ಜುಲೈ 8ರ ವರೆಗೆ ಕಚೇರಿ ಅಧೀಕ್ಷಕರಾಗಿದ್ದ ಪಿ ಡಿ ಸುಬ್ಬಪ್ಪ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಅಕ್ರಮ ಮರೆಮಾಚಲು ನಿಗಮದಲ್ಲಿದ್ದ ಲೆಕ್ಕಪತ್ರಗಳು, ನಗದು ನೋಂದಣಿ ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್‌ಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿರುವ ಆರೋಪ ಸುಬ್ಬಪ್ಪ ಮೇಲಿದೆ.

ಹಾಗೆಯೇ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ. ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments