ವಾಲ್ಮೀಕಿ ನಿಗಮ ಹಗರಣ, ಮುಡಾ ಅಕ್ರಮ ಹಾಗೂ ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಮುಖ್ಯಮಂತ್ರಿಯೇ ಇರಲಿ; ಅಥವಾ ಯಾರೇ ಇರಲಿ. ಅವರಿಗೆ ಶಿಕ್ಷೆ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ಮುಖಂಡರ ಜೊತೆ ಗುರುವಾರ ಮಾತುಕತೆ ನಡೆಸುವ ವೇಳೆ ಮಾತನಾಡಿ, “ನಾಡಿನ ದೀನದಲಿತರು, ಪರಿಶಿಷ್ಟ ಜಾತಿ, ಪಂಗಡಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಅವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ” ಎಂದು ಆರೋಪಿಸಿದರು.
“ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಈ ಹೋರಾಟ ಕೈಗೆತ್ತಿಕೊಂಡಿದ್ದೇವೆ. ನಿಮ್ಮ ಧ್ವನಿಯಾಗಿ ನಾವು ಇವತ್ತು ಹೋರಾಟ ಮಾಡುತ್ತಿದ್ದೇವೆ. ದಲಿತ ಸಮುದಾಯ, ದಲಿತ ಸಂಘಟನೆಗಳು ಧ್ವನಿ ಎತ್ತದೆ ಇರುವ ಕಾರಣ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಇಳಿದಿದ್ದೇವೆ” ಎಂದರು.
“ದಲಿತ ಸಮುದಾಯಗಳ ಪರವಾಗಿ ದೇವರು ಮೆಚ್ಚುವಂತೆ ಇಂದು ಮತ್ತು ಭವಿಷ್ಯದಲ್ಲೂ ಧ್ವನಿ ಎತ್ತುತ್ತೇವೆ. ನಿಮ್ಮ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆ” ಎಂದು ತಿಳಿಸಿದರು.
ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಕೊಳ್ಳೇಗಾಲ ಮಹೇಶ್, ಪಕ್ಷದ ಪ್ರಮುಖರು, ದಲಿತ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.