ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 8 ದಿನಗಳ ಕಾಲ ಪಾದಯಾತ್ರೆ ನಡೆಯುತ್ತಿದ್ದು, ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಾಳೆ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರು ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ಕರೆದು ಮಾತನಾಡಿದ ಅವರು, “ಹಗರಣಗಳ ಸರ್ಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರ್ಕಾರ. ನಮ್ಮ ಪ್ರತಿಭಟನೆ ಭ್ರಷ್ಟಾಚಾರ ವಿರುದ್ಧ” ಎಂದರು.
“ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯತೆಯ ಕೊಡುಗೆ ನೀಡಿದೆ. ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ಎಲ್ಲ ಸಮುದಾಯಗಳಿಗೆ ಮೋಸ ಮಾಡಿದ್ದಾರೆ. ಪರಿಶಿಷ್ಟರ ಹಣ ಲೂಟಿ ಮಾಡಲಾಗಿದೆ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಹೋರಾಟ ನಡೆಸುತ್ತಿದ್ದೇವೆ” ಎಂದು ಹೇಳಿದರು.
“ನಾಳೆ ಸುಮಾರು 16 ಕಿ.ಮೀ ಪಾದಯಾತ್ರೆ ಇರಲಿದೆ. ಎರಡನೇ ದಿನ ಭಾನುವಾರ ಮಂಜುನಾಥ ಕನ್ವೆನ್ಷನ್ ಹಾಲ್ ಬಿಡದಿಯಿಂದ ಆರಂಭಗೊಂಡು 22 ಕಿಮೀ, 5ರಂದು ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 6ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 5ನೇ ದಿನ ಮಂಡ್ಯ ಶಶಿಕಿರಣ್ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ 16 ಕಿಮೀ, 8ರಂದು ಗುರುವಾರ ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದು ಶುಕ್ರವಾರ ಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣಮಂಟಪದಿಂದ ಆರಂಭವಾಗಲಿದೆ. 10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ” ಎಂದು ವಿವರಿಸಿದರು.
“ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಇದರ ರೂಟ್ ಮ್ಯಾಪ್ ಸಿದ್ಧಗೊಂಡಿದೆ” ಎಂದರು.
ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸ ಆಕ್ಷೇಪ
“ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿಗಳಿಲ್ಲದೇ ಸಚಿವ ಸಂಪುಟದ ಸಭೆ ನಡೆದಿದೆ. ರಾಜ್ಯಪಾಲರ ನೋಟಿಸ್‌ಗೆ ಉತ್ತರ ಕೊಡಬೇಕಾದ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ನಡೆಸಿ ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸ ಆಗಿದೆ” ಎಂದು ಆಕ್ಷೇಪಿಸಿದರು.