Homeಕರ್ನಾಟಕಕೇಂದ್ರ ಬಜೆಟ್‌-2024 | ರಾಜ್ಯ ಬಿಜೆಪಿ ನಾಯಕರು ಏನಂದ್ರು?

ಕೇಂದ್ರ ಬಜೆಟ್‌-2024 | ರಾಜ್ಯ ಬಿಜೆಪಿ ನಾಯಕರು ಏನಂದ್ರು?

ಕೇಂದ್ರ ಬಜೆಟ್​​ನಲ್ಲಿ ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಇದರ ಜೊತೆಗೆ ಬೇರೆ ರಾಜ್ಯಗಳನ್ನು ಕಡೆಗಣಿಸಿಲ್ಲ. ಯಾವುದೇ ತಾರತಮ್ಯ ಮಾಡದೆ ಬಜೆಟ್​ ಮಂಡಿಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದರು.

ಕೇಂದ್ರ ಬಜೆಟ್‌ ಕುರಿತು ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿದ ಅವರು, “ಉದ್ಯೋಗ ಸೃಷ್ಟಿ, ಕೃಷಿಗೆ ಕೇಂದ್ರ ಬಜೆಟ್​ನಲ್ಲಿ ಒತ್ತು ಕೊಟ್ಟಿದ್ದಾರೆ. ದೇಶದ ರೈತರ ಪರ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಮೀಸಲು ಇಡಲಾಗಿದೆ” ಎಂದರು.

“ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಆ ಮೂಲಕ ಬಡವರಿಗೆ ಅನುಕೂಲ ಆಗಲಿದೆ. ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡಲಾಗಿದೆ. ಇದು ಮಧ್ಯಮ ವರ್ಗದವರಿಗೆ ಅನುಕೂಲ. ಒಂದು ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಕೊಡಲಾಗುತ್ತಿದೆ. ಕೈಗಾರಿಕಾ ತೆರಿಗೆ ಕಡಿಮೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ, ಕೃಷಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ” ಎಂದರು.

ಬಿ ವೈ ವಿಜಯೇಂದ್ರ

“2024-25ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ ಮೀಸಲಿರಿಸಿ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ನೀಡುವ ಮೂಲಕ ರೈತರ ಏಳಿಗೆಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿರುವುದು ರೈತರು ಹಾಗೂ ಸ್ತ್ರೀ ಕುಲದ ಬಗೆಗಿನ ಅದಮ್ಯ ವಿಶ್ವಾಸವನ್ನು ಸಂಕೇತಿಸಿದೆ” ಎಂದಿದ್ದಾರೆ.

ಕರ್ನಾಟಕಕ್ಕೆ ಲಾಭವಾಗಲಿದೆ: ಬೊಮ್ಮಾಯಿ

ದೆಹಲಿಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, “ಕರ್ನಾಟಕಕ್ಕೆ ರೈಲು, ರಸ್ತೆ ನಿರ್ಮಾಣಕ್ಕೆ ಅನುದಾನ ಸಿಗಲಿದೆ. ಕೈಗಾರಿಕಾ ಕಾರಿಡಾರ್ ನಿರ್ಮಾಣದಿಂದ ಕರ್ನಾಟಕಕ್ಕೂ ಅನುಕೂಲವಾಗಲಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯವನ್ನು ನೀಡಿದೆ. ಬಡತನ ನಿರ್ಮೂಲನೆ, ಮನೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬೇರೆ ಬೇರೆ ಯೋಜನೆಗಳ ಮೂಲಕ ಕರ್ನಾಟಕಕ್ಕೆ ಲಾಭವಾಗಲಿದೆ” ಎಂದರು.

ಕರ್ನಾಟಕಕ್ಕೆ ವೈಯಕ್ತಿಕ ಘೋಷಣೆ ಇಲ್ಲ: ಗೋವಿಂದ ಕಾರಜೋಳ

ಬಿಜೆಪಿ ಸಂಸದ ಗೋವಿಂದ ಕಾರಜೋಳ ಕೂಡ ಪ್ರತಿಕ್ರಿಯಿಸಿ, “ಕರ್ನಾಟಕದ ವಿಚಾರವಾಗಿ ವೈಯಕ್ತಿಕ ಘೋಷಣೆ ಇರುವುದಿಲ್ಲ. ಎಲ್ಲಾ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಘೋಷಣೆ ಮಾಡಲಾಗಿದೆ. ಕೇಂದ್ರ ಬಜೆಟ್​ನಲ್ಲಿ ರೈಲ್ವೆ, ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿಕೆ ನೀಡಿ, “ಕೇಂದ್ರ ಬಜೆಟ್​​ನಲ್ಲಿ ಕೃಷಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಆಗುತ್ತೆ. ಬಿಹಾರ, ಆಂಧ್ರದಂತೆ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗುತ್ತದೆ” ಎಂದಿದ್ದಾರೆ.

ಮೋದಿಯವರಿಗೆ ದೇಶ ಮುಖ್ಯ: ಡಾ.ಕೆ.ಸುಧಾಕರ್

ಸಂಸದ ಡಾ.ಕೆ.ಸುಧಾಕರ್​​ ಹೇಳಿಕೆ ನೀಡಿ, “ಜನ ಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಬಜೆಟ್​ ಮಂಡಿಸಲಾಗಿದೆ. ಪ್ರಧಾನಿ ಮೋದಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಮೋದಿಯವರಿಗೆ ರಾಜಕೀಯದ ಲಾಭ ನಷ್ಟಕ್ಕಿಂತ ದೇಶ ಮುಖ್ಯ. ವಿಶೇಷವಾಗಿ ಕಾಂಗ್ರೆಸ್​ ಸರ್ಕಾರಕ್ಕೆ ಬುದ್ಧಿ ಹೇಳುವ ಕೆಲಸ ಆಗಿದೆ” ಎಂದು ಹೇಳಿದ್ದಾರೆ.

ಮಹಿಳೆಯರು, ರೈತರ ಪರ ಬಜೆಟ್: ಸಿ.ಟಿ.ರವಿ

ವಿಧಾನಸೌಧದಲ್ಲಿ ಪರಿಷತ್​ ಬಿಜೆಪಿ ಸದಸ್ಯ ಸಿ ಟಿ ರವಿ ಪ್ರತಿಕ್ರಿಯಿಸಿದ್ದು, “ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ಕೊಟ್ಟಿದ್ದಾರೆ. 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿಗೆ ತರಬೇತಿ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ 2.65 ಲಕ್ಷ ಕೋಟಿ ರೂ. ಹಂಚಿಕೆ ಮಾಡಿದ್ದಾರೆ. ದೇಶಾದ್ಯಂತ 12 ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ. ಇದು ಬಡವರ ಪರ, ಮಹಿಳೆಯರ ಪರ, ರೈತರ ಪರ ಬಜೆಟ್” ಎಂದು ಹೇಳಿದ್ದಾರೆ.​​

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments