ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಗುರುವಾರ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು.
“ಪರಿಶಿಷ್ಟ ಜಾತಿ, ಪಂಗಡಗಳ ಹಣಕ್ಕೆ ಕನ್ನ ಹಾಕಿದ್ದು ಗೊತ್ತಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿತ್ತು” ಎಂದು ವಿಜಯೇಂದ್ರ ಹೇಳಿದರು.
“ದೊಡ್ಡ ದೊಡ್ಡವರು ಹೇಳಿದ್ದಕ್ಕೆ ಹಣ ದುರುಪಯೋಗ ಎಂಬ ಮಾಹಿತಿಯನ್ನು ಇ.ಡಿ. ಕಸ್ಟಡಿಯಲ್ಲಿರುವ ನಾಗೇಂದ್ರ ಹೇಳಿದ್ದಾಗಿ ಮಾಹಿತಿ ಇದೆ. ಯಾವತ್ತು ಸರಕಾರ ಬೀಳುತ್ತೋ ಗೊತ್ತಿಲ್ಲ ಎಂಬ ಆತಂಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರನ್ನು ಕಾಡುತ್ತಿದೆ. ಅವರಿಗೆ ಈಗ ನಿದ್ರೆ ಬರುತ್ತಿಲ್ಲ” ಎಂದು ತಿಳಿಸಿದರು.
“ಇ.ಡಿ. ಕಸ್ಟಡಿಯಲ್ಲಿರುವ ನಾಗೇಂದ್ರ ಎಲ್ಲಿ ತಮ್ಮ ಹೆಸರು ಹೇಳುವರೋ ಎಂಬ ಭಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಕಾಡುತ್ತಿದೆ. ಒಂದೆಡೆ ಎಸ್ಇಪಿ, ಟಿಎಸ್ಪಿ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. ಪರಿಶಿಷ್ಟರ ಅಭಿವೃದ್ಧಿಗೆ ಇಟ್ಟಿದ್ದ ಹಣ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿಯಾಗಿದೆ. ಮೈಸೂರಿನ ಸಾವಿರಾರು ಕೋಟಿ ಮೊತ್ತದ ಮುಡಾ ಹಗರಣದ ಮೂಲಕ ಸಿದ್ದರಾಮಯ್ಯನವರ ಬಂಡವಾಳ ಬಯಲಾಗಿದೆ ಎಂದು ಟೀಕಿಸಿದರು. ಬಡವರಿಗೆ ಕೊಡಬೇಕಾದ ನಿವೇಶನಗಳ ಪೈಕಿ 14 ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಕೊಡಿಸಿ ಲೂಟಿ ಮಾಡಿದ್ದಾರೆ” ಎಂದು ಆಕ್ಷೇಪಿಸಿದರು.
ಯೋಗ್ಯತೆ, ನೈತಿಕತೆ ಇಲ್ಲ
“ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ್ಯತೆ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಜನಾಂಗದವರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ಬಿಜೆಪಿ ರಾಜಕೀಯ ಮಾಡಲು ಬಂದಿಲ್ಲ; ನಮ್ಮ ಕರ್ತವ್ಯವನ್ನು ನಾವು ಈಡೇರಿಸುತ್ತಿದ್ದೇವೆ” ಎಂದರು.
ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಮಾತನಾಡಿ, “ಸುಳ್ಳು ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರ ಸರಕಾರವು ಹಗರಣಗಳ ಸರಕಾರವಾಗಿ ಮಾರ್ಪಟ್ಟಿದೆ. ಹಿಂದೆ ದೇಶವನ್ನೇ ಕೊಳ್ಳೆ ಹೊಡೆದ ಕಾಂಗ್ರೆಸ್ ಸರಕಾರದ ಮಾದರಿಯಲ್ಲೇ ಈ ಸರಕಾರ ನಡೆದುಕೊಳ್ಳುತ್ತಿದೆ” ಎಂದು ಟೀಕಿಸಿದರು.
ನೂಕಾಟ, ತಳ್ಳಾಟದ ಬಳಿಕ ಬಂಧನ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಮುಖರು ಮತ್ತು ಕಾರ್ಯಕರ್ತರು ಮುನ್ನುಗ್ಗಿದಾಗ ಪೊಲೀಸರು ತಡೆಬೇಲಿ ಹಾಕಿ ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ನೂಕಾಟ, ತಳ್ಳಾಟ ನಡೆಯಿತು. ಬಳಿಕ ಎಲ್ಲರನ್ನೂ ಬಂಧಿಸಲಾಯಿತು. ಕಾರ್ಯಕರ್ತರು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಿದರು. ನಂತರ ಪೊಲೀಸರು ಬಂಧಿಸಿ ಕರೆದೊಯ್ದರು.