Homeಕರ್ನಾಟಕಮುಡಾ ಹಗರಣ | ಮೈಸೂರು ಡಿಸಿ ವರ್ಗಾವಣೆ ಏಕೆ; ಸಿಎಂಗೆ ಪ್ರಲ್ಹಾದ್‌ ಜೋಶಿ ಪ್ರಶ್ನೆ

ಮುಡಾ ಹಗರಣ | ಮೈಸೂರು ಡಿಸಿ ವರ್ಗಾವಣೆ ಏಕೆ; ಸಿಎಂಗೆ ಪ್ರಲ್ಹಾದ್‌ ಜೋಶಿ ಪ್ರಶ್ನೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ತಮ್ಮ ಪಾತ್ರ ಇಲ್ಲವೆಂದರೆ ಮೈಸೂರು ಡಿಸಿ ವರ್ಗಾವಣೆ ಮಾಡಿದ್ದು ಏಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದರು.

“ಮುಡಾ ಹಗರಣದಲ್ಲಿ 4 ಸಾವಿರ ಕೋಟಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಕಾಲದಲ್ಲಿ ಕೊಟ್ಟಿದ್ದು ಎನ್ನುತ್ತಾರೆ. ಈ ಎಲ್ಲ ಅವ್ಯವಹಾರ ಆಗಿದ್ದು 2013 ರಿಂದ 2018 ರವರೆಗೆ. 2017ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ” ಎಂದು ಆರೋಪಿಸಿದರು.

“ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಕಳೆದ ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗ ಜಮೀನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ” ಎಂದರು.

“ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದರು. ಅದಕ್ಕೆ ಯಾವ ದಾಖಲೆಯೂ ಇಲ್ಲ. ಕೋರ್ಟ್ ಮಾನಹಾನಿ ಕೇಸ್ ಹಾಕಲಾಗಿತ್ತು. ಅದಕ್ಕೆ ವಾರೆಂಟ್ ತಗೆದುಕೊಂಡಿದ್ದಾರೆ. ಇದೀಗ ಎರಡು ಹಗರಣಗಳಲ್ಲಿ ಮುಖ್ಯಮಂತ್ರಿಯದ್ದೇ ಪಾತ್ರ ಇದೆ” ಎಂದು ದೂರಿದರು.

“ಸಿದ್ದರಾಮಯ್ಯ ಅವರು ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಮಾಡಿರುವ ಬಹುದೊಡ್ಡ ಹಗರಣ. ಇದರ ತನಿಖೆ ಸಿಬಿಐ ಕಡೆಯಿಂದ ನಡೆಯಬೇಕು. ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಕೊಡಲಿ” ಎಂದು ಒತ್ತಾಯಿಸಿದರು.

“ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಬೋಗಸ್ ಗ್ಯಾರಂಟಿ ಹೆಸರಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ದಿವಾಳಿ ಸರ್ಕಾರದಲ್ಲಿ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಬಣವೆಗೆ ಬೆಂಕಿ ಹಚ್ಚಿ ಸಿಗರೇಟ್ ಹೇಗೆ ಹಚ್ಕೋಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕು. ದಲಿತರ ಹಣ ಗ್ಯಾರಂಟಿಗೆ ಉಪಯೋಗ ಮಾಡಿಕೊಂಡಿದ್ದಾರೆ” ಎಂದು ಜೋಶಿ ಹರಿಹಾಯ್ದರು.

“ಒಂದು ಕಡೆ ವಾಲ್ಮೀಕಿ ಹಗರಣ, ಮತ್ತೊಂದು ಕಡೆ ಮುಡಾ ಹಗರಣ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್​​ಐಟಿಯವರು ಕೆಲವರನ್ನು ಬಂಧಿಸಿದ್ದಾರೆ. ಅವರಿಗೆ ಅವಕಾಶ ಕೊಟ್ಟು ನೋಟಿಸ್ ಕೊಟ್ಟಿದ್ದಾರೆ. ನಾಗೇಂದ್ರ ಅವರಿಗೆ ಶುಕ್ರವಾರ ನೋಟಿಸ್ ಕೊಟ್ಟಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕಡುಭ್ರಷ್ಟ ಸರ್ಕಾರ” ಎಂದು ಜೋಶಿ ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments