ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ಕನ್ನಡದಲ್ಲಿ ಪತ್ರಿಕೆಯನ್ನು ಮಾಡಲು ಜರ್ಮನಿಯಿಂದ ಒಬ್ಬ ಮತಪ್ರಚಾರಕ ಬರಬೇಕಾಯಿತು.
ಮತಪ್ರಚಾರಕ್ಕೆಂದು ಮಂಗಳೂರಿಗೆ ಬಂದಿದ್ದ 32 ವರ್ಷದ ಯುವಕ ಮೊಗ್ಲಿಂಗ್ ಪ್ರಚಾರ ಮಾಡಿದ್ದು ಕನ್ನಡ ಭಾಷೆಯನ್ನು, ಪ್ರಾರಂಭಿಸಿದ್ದು ಮಂಗಳೂರು ಸಮಾಚಾರ ಎಂಬ ಪತ್ರಿಕೆಯನ್ನು. ಈತನೇ ಕನ್ನಡ ಪತ್ರಿಕೋದ್ಯಮದ ಪಿತಾಮಹ.
ಕಲ್ಲಚ್ಚಿನ ಕನ್ನಡದ ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಗಿದ್ದು 1843ರ ಜುಲೈ ಒಂದರಂದು. ಬರಿಗಾಲುಗಳಲ್ಲಿಯೇ ಅಡ್ಡಾಡುತ್ತಿದ್ದ ಮೊಗ್ಲಿಂಗ್ 1844ರ ವರೆಗೆ ಹದಿನಾರು ಸಂಚಿಕೆಗಳ ನ್ನು ಪ್ರಕಟಿಸಿ ಕನ್ನಡಿಗರ ಮನೆಮನೆಗಳಿಗೆ ತಲುಪಿಸಿದ. ಮಂಗಳೂರಿನಲ್ಲಿ ಪತ್ರಿಕೆಯ ಮುದ್ರಣ ನಿಂತುಹೋದ ನಂತರ ಸ್ವಲ್ಪ ಕಾಲ ಪತ್ರಿಕೆ ಬಳ್ಳಾರಿಯಿಂದಲೂ ಪ್ರಕಟವಾಗಿ ನಿಂತುಹೋಯಿತು.
ಮಂಗಳೂರಿಗೆ ಬಂದು ಕನ್ನಡ ಕಲಿತಿದ್ದ ಮೊಗ್ಲಿಂಗ್ ಕನ್ನಡ ಲಿಪಿಯನ್ನು ಪರಿಷ್ಕರಿಸಿ ಅದರ ಮೂಲಕವೇ ದಾಸರ ಪದಗಳು, ರಾಜೇಂದ್ರ ನಾಮ, ಚನ್ನಬಸವ ಪುರಾಣ, ಬಸವ ಪುರಾಣ, ತುಳು ಗಾದೆಗಳು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ.
ಅಂದಹಾಗೆ ಭಾರತದಲ್ಲಿ ಏಳು ಮಂದಿ ಪತ್ರಕರ್ತರಾದ
ಸಿದ್ದಿಕಿ ಕಪ್ಪನ್, ಗೌತಮ್ ನವ್‌ಕಾಲ, ಅಸೀಪ್ ಸುಲ್ತಾನ ಫಹಾದ್ ಶಹಾ, ಶಹಜಹಾದ್ ಗುಲ್ ,ಮನ್ನನ್ ಧರ್ ಮತ್ತು ರೂಪೇಶ್ ಕುಮಾರ್ ಸಿಂಗ್ ಜೈಲಲ್ಲಿದ್ದಾರೆ.
ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಸಾಲಲ್ಲಿ 161ನೇ ಸ್ಥಾನದಲ್ಲಿ ನಿಂತಿದೆ. ಕಳೆದ ವರ್ಷ 150ನೇ ಸ್ಥಾನದಲ್ಲಿತ್ತು.
ಈ ಸೂಚ್ಯಂಕ ದಲ್ಲಿ ಪಾಕಿಸ್ತಾನ 150, ಶ್ರೀಲಂಕಾ 152 ತಾಜಕಿಸ್ತಾನ 153 ಮತ್ತು ಅಫ್ಘಾನಿಸ್ತಾನ 152ನೇ ಸ್ಥಾನದಲ್ಲಿದೆ.
ಪತ್ರಕರ್ತರ ಭದ್ರತೆಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಸಾಲಲ್ಲಿ 172ನೇ ಸ್ಥಾನದಲ್ಲಿದೆ.
ಚೀನಾ, ಉಕ್ರೇನ್, ಸಿರಿಯಾ ದೇಶಗಳು ನಮಗಿಂತಲೂ ಕೆಳಗಿವೆ ಎನ್ನುವುದೊಂದೇ ಸಮಾಧಾನ.
ಪತ್ರಕರ್ತ ಬಂಧುಗಳಿಗೆ ಕನ್ನಡ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
-ದಿನೇಶ್ ಅಮೀನ್ ಮಟ್ಟು
ಹಿರಿಯ ಪತ್ರಕರ್ತ.