ವಾಲ್ಮೀಕಿ ಅಭಿವೃದ್ಧಿ ನಿಗಮದ ನಡೆದಿರುವ 187 ಕೋಟಿ ರೂ. ಹಗರಣ ಸಂಬಂಧ ಹಣಕಾಸು ಸಚಿವ ಮುಖ್ಯಮಂತ್ರಿಯವರು ಜವಾಬ್ದಾರಿ ಹೊರಬೇಕು. ಈ ಸಂಬಂಧ ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಆಗ್ರಹಿಸಿದರು.
ದೆಹಲಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದೇ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಪೋಲಾಗಿದೆ; ಅದರ ದುರ್ಬಳಕೆ ಆಗಿದೆ. ಕಾಂಗ್ರೆಸ್ ಸರಕಾರವು ಈ ಹಣವನ್ನು ದೋಚಿದೆ” ಎಂದು ಟೀಕಿಸಿದರು.
“ಕರ್ನಾಟಕ ರಾಜ್ಯ ಸರಕಾರವು ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದ ಅವರು, ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತಮಗೆ ಬೇಕಾದಂತೆ ತನಿಖೆ ನಡೆಸುತ್ತಿದೆ” ಎಂದು ಆರೋಪಿಸಿದರು.
“ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ಜನರಿಗೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯುತ್ ದರ ಏರಿಸಿದ್ದಾರೆ. ರೈತರು ತಮ್ಮ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಲು 25 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ” ಎಂದರು.
“ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿದ್ದಾರೆ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ. ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಸಾಮಾನ್ಯ ಜನರೂ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ರಾಜ್ಯದ ಕಾಂಗ್ರೆಸ್ ಸರಕಾರವು ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದರೂ ಸಹ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ಮತ್ತೊಂದೆಡೆ ಅಭಿವೃದ್ಧಿಶೂನ್ಯತೆ ರಾಜ್ಯವನ್ನು ಕಾಡುವಂತಾಗಿದೆ. ಅಭಿವೃದ್ಧಿ ಇಲ್ಲದೆ ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ” ಎಂದರು.