ಲೋಕಸಭೆ ಚುನಾವಣೆಯ ಮುಕ್ತಾಯಗೊಂಡು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜನಸಾಮಾನ್ಯರ ಮೇಲೆ ದರ ಏರಿಕೆಯ ಹೊರೆ ಬಿದ್ದಿದೆ.
ನೂತನ ಸರ್ಕಾರದ ಗುತ್ತು ಗುರಿಗಳ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಮ್ಮ ಕನಸಿನ ಬಜೆಟ್ ಮಂಡಿಸಲು ಸಜ್ಜುಗೊಳ್ಳುತ್ತಿರುವಾಗಲೇ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿಗಳವರೆಗೆ ಹೆಚ್ಚಳ ಮಾಡಿದೆ.
ರಾಜ್ಯದಲ್ಲಿ ಈ ಮೊದಲು ಪ್ರತಿ ಲೇಟರ್ ಪೆಟ್ರೋಲ್ಗೆ ಶೇಕಡಾ 25.92 ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿತ್ತು. ಇದನ್ನು ಮಾರ್ಪಡಿಸಿ ಈಗ ಶೇಕಡಾ 29.84 ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿದೆ.
ಅದೇ ರೀತಿಯಲ್ಲಿ ಪ್ರತಿ ಲೇಟರ್ ಡೀಸೆಲ್ ಗೆ ವಿಧಿಸಲಾಗುತ್ತಿದ್ದ ಶೇಕಡಾ 14.34 ರಷ್ಟು ಮಾರಾಟ ತೆರಿಗೆಯನ್ನು ಶೇಕಡಾ18.44ಕ್ಕೆ ಹೆಚ್ಚಳ ಮಾಡಲಾಗಿದೆ.
ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 102.85 ಆಗಲಿದ್ದರೆ ಪ್ರತಿ ಲೀಟರ್ ಡೀಸೆಲ್ ಬೆಲೆ 88.93 ರೂಪಾಯಿ ಆಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಈ ದರಗಳು ಇರಲಿದ್ದು ಸಾಗಾಣಿಕೆ ವೆಚ್ಚದ ಆಧಾರದಲ್ಲಿ ಇತರೆ ನಗರಗಳಲ್ಲಿ ದರದಲ್ಲಿ ಕೊಂಚಮಟ್ಟಿನ ವ್ಯತ್ಯಾಸವಾಗಲಿದೆ.