Homeಕರ್ನಾಟಕಪೋಕ್ಸೊ ಪ್ರಕರಣ | ಬಿಎಸ್‌ವೈ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಲು ಕೋರ್ಟ್‌ ಆದೇಶ

ಪೋಕ್ಸೊ ಪ್ರಕರಣ | ಬಿಎಸ್‌ವೈ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಲು ಕೋರ್ಟ್‌ ಆದೇಶ

ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು ಎಂದು ಕೋರಿ ಸಿಐಡಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಪ್ರಾಸಿಕ್ಯೂಷನ್ ನಗರದ ವಿಶೇಷ ನ್ಯಾಯಾಲಯ ಪುರಸ್ಕರಿಸಿ, ಬಿಎಸ್‌ವೈ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಲು ಆದೇಶಿಸಿದೆ. ಇದರಿಂದ ಯಾವುದೇ ಕ್ಷಣದಲ್ಲಿ ಯಡಿಯೂರಪ್ಪ ಬಂಧನ ಸಾಧ್ಯತೆ ಇದೆ.

“ರೇಪ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವ ನೆಪದಲ್ಲಿ ಹದಿನೇಳು ವರ್ಷದ ಬಾಲಕಿಯನ್ನು ರೂಮಿನಲ್ಲಿ ಕರೆದುಕೊಂಡು ಆಕೆಯ ಅಂಗಾಂಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು ಎಂದು ರಾಜ್ಯ ಪ್ರಾಸಿಕ್ಯೂಷನ್ ನಗರದ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಬುಧವಾರ ಮನವಿ ಮಾಡಿತ್ತು.

ಈ ಕುರಿತ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್.ಎಂ. ರಮೇಶ್ ಗುರುವಾರ ವಿಚಾರಣೆ ನಡೆಸಿದರು‌.

ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ವಾದ ಮಂಡಿಸಿ, “ಆರೋಪಿಯು ತುಂಬಾ ಬಲಾಢ್ಯರು.‌ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಇವರ ಇಬ್ಬರು ಪುತ್ರರಲ್ಲಿ ಒಬ್ಬರು ಹಾಲಿ ಸಂಸದರು ಹಾಗೂ ಮತ್ತೊಬ್ಬರು ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರು. ಇಂತಹವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗುತ್ತಿಲ್ಲ. ಬರಿದೆ ಸಮಯ ಕೇಳುತ್ತಿದ್ದಾರೆ” ಎಂದು ಹೇಳಿದರು.

“ಘಟನೆ ನಡೆದ ದಿನವೇ ಯಡಿಯೂರಪ್ಪ ಸಂತ್ರಸ್ತ ಬಾಲಕಿಯ ತಾಯಿಗೆ ₹2 ಲಕ್ಷ ನೀಡಿದ್ದಾರೆ. ಬೇಡ ಎಂದರೂ ಅವರ ಪರ್ಸಿನಲ್ಲಿ ತುರುಕಿ ಕಳಿಸಿದ್ದಾರೆ. ನೀನು ಕಷ್ಟದಲ್ಲಿ ಇದ್ದೀಯ. ಇಟ್ಟುಕೊ ಎಂದು ಸಮಾಧಾನ ಮಾಡುವ ನೆಪದಲ್ಲಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಆ ತಾಯಿ ಮಾಡಿಕೊಂಡಿದ್ದ ವಿಡಿಯೊ ಡಿಲಿಟ್ ಮಾಡಿಸಿದ್ದಾರೆ. ಹೀಗೆ ಹಲವು ಹಂತಗಳಲ್ಲಿ ಸಾಕ್ಷ್ಯ ನಾಶ ಮಾಡುತ್ತಲೇ ಇದ್ದಾರೆ” ಎಂದು ಕೋರ್ಟ್‌ ಗಮನಕ್ಕೆ ತಂದರು.

“ಒಂದು ವೇಳೆ ಅವರು ಕೇಳಿದಷ್ಟು ಸಮಯ ನೀಡಿದ್ದೇ ಆದರೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲು ಆದೇಶಿಸಬೇಕು” ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ಕೋರಿದರು. ವಾದ ಆಲಿಸಿದ ನ್ಯಾಯಾಧೀಶ ಎನ್ ಎಂ ರಮೇಶ್ ಅವರು ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ​ವಾರಂಟ್ ಆದೇಶ ಪ್ರಕಟಿಸಿದರು.

ದೆಹಲಿಗೆ ಹೋಗುವೆ ಎಂದಿದ್ದ ಬಿಎಸ್‌ವೈ

ಪೋಕ್ಸೊ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೀಡಿದ್ದ ನೋಟಿಸ್​ಗೆ ಬಿ ಎಸ್‌ ಯಡಿಯೂರಪ್ಪ ಉತ್ತರಿಸಿ, “ಜೂನ್ 17ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುತ್ತೇನೆ. ಸಕಾರಣಗಳಿಂದ ಈ ಬಾರಿ ತನಿಖೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿನಾಯಿತಿ ನೀಡಬೇಕು” ಎಂದು ಕೋರಿದ್ದರು.

“ನಾನು ಕಳೆದ ಮಾರ್ಚ್ 28 ರಂದು ನೀಡಿದ್ದ ನೋಟಿಸ್ ನಂತೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೆ. ಆದರೆ ಮತ್ತೆ ಜೂನ್ 12 ರಂದು ತಾವು ನೀಡಿರುವ ನೋಟಿಸ್ ನನಗೆ ನಿನ್ನೆಯಷ್ಟೇ ತಲುಪಿದೆ. ನಾನು ಪಕ್ಷದ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿರುವುದರಿಂದ ದೆಹಲಿಗೆ ತೆರಳುತ್ತಿದ್ದೇನೆ. ಹೀಗಾಗಿ ಈ ಬಾರಿ ನಾನು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಯಡಿಯೂರಪ್ಪ ಅವರು ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಳೆದ ಮಾರ್ಚ್ ತಿಂಗಳಲ್ಲೇ ಪೋಕ್ಸೊ ಕಾಯ್ದೆಯಡಿ ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಕಳೆದ ತಿಂಗಳು ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಪೋಕ್ಸೊ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತೆಯ ಸಹೋದರ ಕೂಡ ಯಡಿಯೂರಪ್ಪ ಅವರನ್ನು ಬಂಧಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಲು ಕೋರ್ಟ್‌ ಮೊರೆ ಹೋಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments