Homeಕರ್ನಾಟಕಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ; ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್‌ ಗಂಭೀರ ಆರೋಪ

ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ; ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್‌ ಗಂಭೀರ ಆರೋಪ

ಬಿಜೆಪಿ ಅಧಿಕಾರವಧಿಯಲ್ಲಿ ‘ಭೋವಿ ಅಭಿವೃದ್ಧಿ ನಿಗಮ’ದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೋಟಿ ಕೋಟಿ ರೂಪಾಯಿ ಲಂಚ ಸಂದಾಯವಾಗಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಸಂದರ್ಭದಲ್ಲಿ ಗೂಳಿಹಟ್ಟಿ ಅವರು ಈಗ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಮಾಡಿರುವ ಆರೋಪ ರಾಜಕೀಯ ಸಂಚಲನ ಸೃಷ್ಟಿಸಿದೆ.

13 ನಿಮಿಷಗಳ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗೂಳಿಹಟ್ಟಿ, “ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕೊನೆಯ ಮೂರು ತಿಂಗಳು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಅಧಿಕಾರವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಆಗ ಸಚಿವರಾಗಿದ್ದ ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗೂ ಇದರಲ್ಲಿ ಪಾಲಿದೆ” ಎಂದು ದೂರಿದ್ದಾರೆ.

“ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಲಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ₹50 ಕೋಟಿಯಿಂದ ₹60 ಕೋಟಿಯಷ್ಟು ಹಣ ಎಲ್ಲಿಂದ ಬಂತು? ಇದಕ್ಕೆ ಉತ್ತರ ಸಿಗಬೇಕಲ್ಲವೇ” ಎಂದು ಪ್ರಶ್ನಿಸಿದ್ದಾರೆ.

“ಭೋವಿ ಅಭಿವೃದ್ಧಿ ನಿಗಮದ ಅಕ್ರಮವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ನೀಡುವುದರಿಂದ ಪ್ರಯೋಜನವಿಲ್ಲ. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾದರೆ ಮಾತ್ರ ಸತ್ಯ ಬೆಳಕಿಗೆ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಗಮನ ಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಭೋವಿ ಅಭಿವೃದ್ಧಿ ನಿಗಮದ ₹100 ಕೋಟಿಯನ್ನು ತಿಂದು ಹಾಕಲಾಗಿದೆ. ಭೊವಿ ಸಮಾಜದ ಮುಖಂಡರ ಪಾತ್ರವೂ ಇದರಲ್ಲಿದೆ. ಸಮಾಜದ ಫಲಾನುಭವಿಗಳಿಗೆ ಒಂದು ರೂಪಾಯಿ ಕೂಡ ತಲುಪಿಲ್ಲ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಈ ಪ್ರಕರಣವನ್ನು ಸಿಐಡಿಗೆ ನೀಡಿದ್ದರು. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಎಚ್‌.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವರಾದ ಬಳಿಕ ತನಿಖೆ ಸ್ಥಗಿತಗೊಂಡಿದೆ. ಏಕೆ ಹೀಗೆ ಮಾಡಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.

“ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹದೇ ಆರೋಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ಕೇಳಿಬಂದಿದೆ. ದೂರು ನೀಡಿದ ಮಹಿಳೆಯ ಸಾವಿನ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ” ಎಂದು ಕೇಳಿದ್ದಾರೆ.

“ಜಾತಿಗೊಂದರಂತೆ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳಲ್ಲಿ ಇಂತಹ ಅವ್ಯಹಾರ ಮಾಮೂಲಿ ಆಗಿದೆ. ವಿವೇಚನಾ ಕೋಟಾದಡಿ ಸಚಿವರಿಗೆ ಶೇ 15, ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಶೇ 5ರಷ್ಟು ನಿಗದಿಪಡಿಸಲಾಗಿದೆ. ಇದು ಅತಿ ಹೆಚ್ಚು ದುರ್ಬಳಕೆ ಆಗುತ್ತಿದೆ ಎಂಬುದನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ” ಎಂದು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments