Homeಕರ್ನಾಟಕನವೀಕರಿಸಬಹುದಾದದ ಇಂಧನ ವಲಯದಲ್ಲಿ ಉದ್ಯೋಗ ಸೃಷ್ಟಿ: ಗೌರವ್‌ ಗುಪ್ತಾ

ನವೀಕರಿಸಬಹುದಾದದ ಇಂಧನ ವಲಯದಲ್ಲಿ ಉದ್ಯೋಗ ಸೃಷ್ಟಿ: ಗೌರವ್‌ ಗುಪ್ತಾ

ವಿದ್ಯುತ್‌ ಉತ್ಪಾದನಾ ವಲಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಇದರಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಹೇಳಿದ್ದಾರೆ.

ಪ್ರತಿ ವರ್ಷ ಜೂನ್‌ 15ರಂದು ವಿಶ್ವ ಪವನ ದಿನ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಬುಧವಾರ ನಾಗರಬಾವಿಯ ಕ್ರೆಡಲ್‌ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಮಾತನಾಡಿದರು.

“ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಗಾಳಿಯ ಗುಣಮಟ್ಟ ಸುಧಾರಿಸುವ ಪರಿಸರ ಸ್ನೇಹಿ ಕ್ರಮಗಳ ಹೊರತಾಗಿಯೂ ಪವನ ವಿದ್ಯುತ್‌ ಸುಸ್ಥಿರ ಆರ್ಥಿಕತೆ ಸಾಧಿಸಲು ನೆರವಾಗುತ್ತದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ ಉದ್ಯೋಗ ಸೃಷ್ಟಿ ಸಾಧ್ಯವಾಗಿಸುತ್ತಿದೆ”ಎಂದು ವಿವರಿಸಿದರು.

“ಇಂಧನ ಸಚಿವರಾದ ಕೆ ಜೆ ಜಾರ್ಜ್‌ ಅವರ ಮಾರ್ಗದರ್ಶನದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಗಮನಾರ್ಹ ಸಾಧನೆ ಮಾಡುತ್ತಿದೆ. ಶುದ್ಧ ಇಂಧನ ಉತ್ಪಾದನೆ ಹಾಗೂ ನವೀನ ಇಂಧನ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸಾಂಪ್ರದಾಯಿಕ ಇಂಧನ ಮೂಲಗಳಿಗಿಂತ ಪವನ ವಿದ್ಯುತ್‌ ಕಡಿಮೆ ಖರ್ಚಿನ ಪರ್ಯಾಯ ಇಂಧನ ಮೂಲವಾಗಿದೆ” ಎಂದು ಹೇಳಿದರು.

“ಪವನ ವಿದ್ಯುತ್‌ ಸಾಮರ್ಥ್ಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, 2024ರ ಏಪ್ರಿಲ್‌ ವೇಳೆಗೆ 46 ಗಿಗಾ ವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಆಗಿದೆ. ಕರ್ನಾಟಕವು 124 ಗಿ.ವ್ಯಾ. ಪವನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5.3 ಗಿ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, 15.4 ಗಿ.ವ್ಯಾ. ಪವನ ಯೋಜನೆಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿವೆ. ಬೀದರ್, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ವಿಜಯಪುರ, ತುಮಕೂರಿನಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಇಂಧನವನ್ನು ಕೇಂದ್ರ ಜಾಲಕ್ಕೆ ಪಡೆಯಲು ಸಿಟಿಯುನಿಂದ ಯೋಜನೆ ಸಿದ್ಧಗೊಂಡಿದೆ. ಪವನ ವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಕರ್ನಾಟಕವು ಅನುಕೂಲಕರ ನೀತಿ ಹೊಂದಿರುವುದರಿಂದ ಇವೆಲ್ಲಾ ಸಾಧ್ಯವಾಗಿದೆ” ಎಂದು ವಿವರಿಸಿದರು.

ಕ್ರೆಡಲ್‌ನಿಂದ ಗ್ರೀನ್‌ ಹೈಡ್ರೋಜನ್‌ ವಲಯದಲ್ಲಿ ಇಂಟರ್ನ್‌ಶಿಪ್‌

ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಅವರು ಮಾತನಾಡಿ, “ಎಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇಂಟರ್ನ್‌ಶಿಪ್‌, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ರೆಡಲ್‌ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.ಮುಂಬರುವ ದಿನಗಳಲ್ಲಿ ಗ್ರೀನ್‌ ಹೈಡ್ರೋಜನ್‌ ವಲಯದಲ್ಲಿ ಇಂಟರ್ನ್‌ಶಿಪ್‌ ನಡೆಸಲು ಉದ್ದೇಶಿಸಲಾಗಿದೆ. ನಮ್ಮಲ್ಲಿ ಇಂಟರ್ನ್‌ಶಿಪ್‌ ಮಾಡಿದ ಎಲ್ಲರಿಗೂ ಉದ್ಯೋಗ ದೊರೆತಿದೆ ಎಂಬ ಹೆಮ್ಮೆ ಇದೆ” ಎಂದು ತಿಳಿಸಿದರು.

ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎನ್‌. ಅಮರನಾಥ್‌, ವಿಜ್ಞಾನಿ ಎಂ.ಪಿ ರಮೇಶ್‌, ಐಡಬ್ಲ್ಯುಪಿಎನ ಉಪಾಧ್ಯಕ್ಷ ಯು.ಬಿ.ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅಜಯ್‌ ದೇವರಾಜ್‌, ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments