2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ನಡೆದ ಮತದಾನದ ಫಲಿತಾಂಶ ಇಂದು (ಜೂ.4) ಪ್ರಕಟವಾಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಬೆಳಿಗ್ಗೆ 7 ಗಂಟೆಗೆ ಎಲ್ಲ ಸ್ಟ್ರಾಂಗ್ರೂಮ್ಗಳು ಓಪನ್ ಆಗಿದ್ದು, 8 ಗಂಟೆಯಿಂದ ಅಂಚೆ ಚೀಟಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. 9 ಗಂಟೆಯಿಂದ ಮತಯಂತ್ರಗಳಲ್ಲಿನ ಮತಗಳ ಕೌಂಟಿಂಗ್ ಆರಂಭಗೊಳ್ಳಲಿದೆ. ರಾಜ್ಯದ ಮತದಾರ ಯಾರತ್ತ ವಾಲಿದ್ದಾನೆ ಎಂಬುದು ಮಧ್ಯಾಹ್ನದ ಹೊತ್ತಿಗೆ ಬಹುತೇಕ ತೆರೆ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ‘ಹ್ಯಾಟ್ರಿಕ್’ ಗೆಲುವಿನ ವಿಶ್ವಾಸದಲ್ಲಿದ್ದರೆ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಅಚ್ಚರಿಯ ಫಲಿತಾಂಶಕ್ಕಾಗಿ ಕಾದುಕೂತಿದೆ. ಕಳೆದ ಬಾರಿ ಕರ್ನಾಟದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಅದನ್ನು ಉಳಿಸಿಕೊಳ್ಳಲು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ.
ದೇಶದಲ್ಲಿ ಬಿಜೆಪಿಯು ಅಧಿಕಾರವನ್ನು ಉಳಿಸಿಕೊಂಡರೆ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆ ಸರಿಗಟ್ಟಲಿದ್ದಾರೆ. ನೆಹರೂ ತಮ್ಮ ಪಕ್ಷವನ್ನು ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದರು. ಈಗ ‘ಇಂಡಿಯಾ ಕೂಟ’ ಮೋದಿಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ? ಎಂಬುದು ಕೂಡ ಕುತೂಹಲ ಸೃಷ್ಟಿಸಿದೆ.